ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ(ರಿ.) ಸುಳ್ಯ ಇದರ ಆಶ್ರಯದಲ್ಲಿ, ರಂಗನಿರ್ದೇಶಕ ಡಾ| ಜೀವನ್ ರಾಂ ಸುಳ್ಯ ಇವರ ಮಾತಾಪಿತೃಗಳ ನೆನಪಿನಲ್ಲಿ ಕೊಡ ಮಾಡುವ 2026 ನೇ ಸಾಲಿನ ವನಜ-ಸುಜನಾ ರಂಗಮನೆ ಪ್ರಶಸ್ತಿಗೆ  ಶ್ರೀ ಧರ್ಮಸ್ಥಳ ಮೇಳದ ಪ್ರಸಿದ್ಧ ಹಾಸ್ಯಗಾರರಾದ ಮಹೇಶ್ ಮಣಿಯಾಣಿಯವರನ್ನು ಆಯ್ಕೆ ಮಾಡಲಾಗಿದೆ.

ಸುಳ್ಯ ತಾಲೂಕಿನ ದೊಡ್ಡತೋಟದವರಾದ ಮಹೇಶ ಮಣಿಯಾಣಿ ಇವರು ಯಕ್ಷಗುರು ಕರ್ಗಲ್ಲು ವಿಶ್ವೇಶ್ವರ ಭಟ್, ಉಬರಡ್ಕ ಉಮೇಶ್ ಶೆಟ್ಟಿ ಯವರಿಂದ ಹೆಜ್ಜೆಗಾರಿಕೆ ಕಲಿತು ಮೇಳ ಸೇರಿದವರು. ಹಿರಿಯ ಯಕ್ಷಗಾನ ಕಲಾವಿದ ರೆಂಜಾಳ ರಾಮಕೃಷ್ಣರಾವ್ ರ ಮಾರ್ಗದರ್ಶನದಲ್ಲಿ ಕಟೀಲು ಮೇಳ ಸೇರಿದ ಇವರು, ಆರಂಭದಲ್ಲಿ ಬಪ್ಪನಾಡು ಮೇಳ, ನಂತರ ಧರ್ಮಸ್ಥಳ ಮೇಳಗಳಲ್ಲಿ ಸ್ತ್ರೀವೇಷ, ಪುಂಡುವೇಷ ನಂತರ ಪೂರ್ಣಪ್ರಮಾಣದ ಹಾಸ್ಯಗಾರರಾಗಿ ಒಟ್ಟು 37 ವರ್ಷ ಯಕ್ಷ ಸೇವೆ ಮಾಡಿದವರು.

ಮಳೆಗಾಲದ ತಿರುಗಾಟದಲ್ಲಿ ಕಳೆದ ಏಳು ವರ್ಷದಿಂದ ಮಹಿಳಾ ಕಲಾವಿದೆ ವಿದ್ಯಾ ಕೋಳ್ಯೂರು ಮತ್ತು ಖ್ಯಾತ ಭಾಗವತ ಪಟ್ಲ ಸತೀಶ್ ಶೆಟ್ಟಿಯವರ ತಂಡದೊಂದಿಗೆ ಅಮೇರಿಕಾ , ಯುರೋಪ್ ಯಕ್ಷ ಪ್ರವಾಸದ ಖಾಯಂ ಕಲಾವಿದರಾಗಿದ್ದಾರೆ. ಬಾಹುಕ, ರಕ್ಕಸ ದೂತ, ನಾರದ, ಮಕರಂದ, ವಿಜಯ, ಶ್ರೀನಿವಾಸ ಕಲ್ಯಾಣದ ಸಖ, ಮಹಾಕಲಿ ಮಗದೆಂದ್ರ ದ ಜಗಜಟ್ಟಿ, ಕೃಷ್ಣ ಲೀಲೆಯ ಮಂತ್ರವಾದಿ, ದಾರುಕ, ಸಮುದ್ರ ಮಥನದ ಮೂಕಾಸುರ ಮುಂತಾದವು ಇವರ ಜನಮೆಚ್ಚುಗೆಯ ಪ್ರಮುಖ ವೇಷಗಳು.

ತನ್ನ ವಿಶಿಷ್ಠ ಬಣ್ಣಗಾರಿಕೆ, ಆಂಗಿಕ ಚಲನೆ, ನಿಖರ ಹೆಜ್ಜೆಗಾರಿಕೆ, ವೇಷಭೂಷಣ, ಸ್ಪಷ್ಟ ಮಾತುಗಾರಿಕೆಯಿಂದ ಪುರಾಣದ ಎಲ್ಲ ಪಾತ್ರಗಳಿಗೆ ಜೀವ ತುಂಬುವ ಅಪರೂಪದ ಕಲಾವಿದರೆನಿಸಿಕೊಂಡಿದ್ದಾರೆ. ಯಕ್ಷಗಾನದ ಪರಂಪರೆಯ ಚೌಕಟ್ಟು ಮೀರದ, ಚೌಕಿಯ ಶಿಸ್ತಿಗೆ ಬದ್ಧರಾದ ಇವರು ರಾಜ್ಯಾದ್ಯಂತ ತನ್ನದೇ ಆದ ಸಾವಿರಾರು ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಪ್ರಸ್ತುತ ಕಳೆದ 25 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದಲ್ಲಿ ಪ್ರಧಾನ ಹಾಸ್ಯಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಶಸ್ತಿಯು ಸನ್ಮಾನ ಪತ್ರ, ರೇಶ್ಮೆ ಶಾಲು, ಫಲಕ, ಫಲಪುಷ್ಪ ಅಲ್ಲದೆ  ರೂ.15,555 ನಗದನ್ನೂ ಹೊಂದಿರುತ್ತದೆ. ಫೆಬ್ರವರಿ 14,15 ರಂದು ರಂಗಮನೆಯಲ್ಲಿ ನಡೆಯುವ ರಂಗಸಂಭ್ರಮ-2026 ರಾಜ್ಯಮಟ್ಟದ ಸಾಂಸ್ಕೃತಿಕ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ರಂಗಮನೆ ಅಧ್ಯಕ್ಷ ಡಾ| ಜೀವನ್ ರಾಂ ಸುಳ್ಯ ತಿಳಿಸಿದ್ದಾರೆ.