ಭಾವೈಕ್ಯತೆ ಸಾರುವ ಹಬ್ಬ ಎಂದೆ ಜನಜನಿತವಾಗಿರುವ ಮೊಹರಂ ಇಂದು ಮುಸ್ಲಿಮ್ ಧರ್ಮದವರು ಬಹಳ ಸಂಭ್ರಮದಿಂದ ಆಚರಿಸುತ್ತಾರೆ.. ಜಾತಿ, ಧರ್ಮದ ಗಡಿ ಮೀರಿ ಆಚರಿಸುವ ಮೊಹರಂ ಮುಸ್ಲಿಮರ ಪಾಲಿನ ಹೊಸ ವರ್ಷ. ಈ ಬಾರಿ ಜುಲೈ ತಿಂಗಳ ಆಗಮನದೊಂದಿಗೆ ಇಸ್ಲಾಮಿಕ್ ಕ್ಯಾಲೆಂಡರ್‌ನ ಹಿಜರಿ ಶಕೆ 1446 ಕೂಡಾ ಕಾಲಿಟ್ಟಿದೆ.
ಕರ್ನಾಟಕದ ಹಲವು ಭಾಗಗಳಲ್ಲಿ ಮೊಹರಂ ಎನ್ನುವುದು ಕೇವಲ ಮುಸ್ಲಿಮರ ಹಬ್ಬವಾಗಿ ಉಳಿದಿಲ್ಲ. ಬದಲಾಗಿ ಈ ಹಬ್ಬವನ್ನು ಹಿಂದೂ, ಮುಸ್ಲಿಮರು ಸೇರಿ ಭಾವೈಕ್ಯದಿಂದ ಆಚರಿಸುತ್ತಾರೆ. ಹಲವೆಡೆ ಧರ್ಮದನಿಯಮಗಳಿಗೆ ವಿರುದ್ಧವಾಗಿ ಆಚರಣೆಗಳು ನಡೆಯುವುದೂ ಇದೆ.
ಈ ಹಬ್ಬಕ್ಕೆ ಐತಿಹಾಸಿಕ ಘಟನೆ ಗಳ ಹಿನ್ನೆಲೆಯೂ ಇದೆ ಹಲವು ಚಾರಿತ್ರಿಕ ಘಟನೆಗಳನ್ನು ನೆನಪು ಮಾಡಿಕೊಡುವುದೂ ಇದೇ ಮೊಹರಂ. ಹಲವು ಪ್ರವಾದಿಗಳ ಜೀವನಕ್ಕೆ ಸಂಬಂಧಿ ಸಿದ ಐತಿಹಾಸಿಕ ಘಟನೆಗಳು ನಡೆದಿದ್ದೂ ಇದೇ ಮೊಹರಂನಲ್ಲೇ. ಹೀಗಾಗಿ ಈ ತಿಂಗಳು ಮುಸ್ಲಿಮರ ಪಾಲಿಗೆ ವಿಶೇಷ.
ವಿವಿಧ ರೀತಿಯ ಕುಣಿತಗಳು, ಡಂಗುರ ಸಾರುವ ಮೆರವಣಿಗೆಗಳನ್ನೂ ಇತ್ತೀಚೆಗೆ ಮೊಹರಂ ಆಚರಣೆ ವೇಳೆ ಕಾಣುತ್ತಿ ದ್ದೇವೆ. ಈ ದಿನದಂದು ಕರ್ಬಲಾದ ನೆನಪು, ಶೋಕಾಚರಣೆ ಹೆಸರಿನಲ್ಲಿ ದೇಹಕ್ಕೆ ಗಾಯ ಮಾಡಿಕೊಳ್ಳುವ ಸಂಪ್ರದಾಯವೂ ಇದೆ. ದುಃಖದ ದಿನವಾಗಿ, ಬಲಿದಾನದ ತಿಂಗಳಾಗಿ ಆಚರಿಸುವ ಪರಿಪಾಠವೂ ಇದೆ.ಮೊಹರಂ ಎಂದ ತಕ್ಷಣ ಹರಿತವಾದ ಆಯುಧಗಳಿಂದ ದೇಹಕ್ಕೆ ಗಾಯ ಮಾಡಿಕೊಳ್ಳುವ ದೃಶ್ಯಗಳು ಕಣ್ಣೆದುರಿಗೆ ಬಂದು ನಿಲ್ಲುವುದು ಸಹಜ.
ಮೊಹರಂ ತಿಂಗಳ 10 ದಿನವನ್ನು ದುಃಖದ ದಿನವಾಗಿ ಪರಿಗಣಿಸುವವರು ಹೀಗೆ ವಿಶಿಷ್ಟ ರೀತಿಯಲ್ಲಿ ಹಬ್ಬ ಆಚರಿಸುತ್ತಾರೆ. ಮುಹರ್ರ೦ ತಿಂಗಳಲ್ಲಿ ನಡೆದ ಕರ್ಬಲಾ ಯುದ್ಧವೇ ಈ ದುಃಖದ ದಿನದ ಹಿಂದಿರುವ ಕಾರಣವಾಗಿದೆ.
ಕರ್ಬಲಾ ಯುದ್ಧ, ಹಝತ್ ಹುಸೈನ್‌ರ ಹತ್ಯೆ: ಮೊಹರಂ ತಿಂಗಳಲ್ಲಿ ನಡೆದ ಇನ್ನೊಂದು ಘಟನೆ ಕರ್ಬಲಾ ಯುದ್ಧ. ಪ್ರವಾದಿ ಮುಹಮ್ಮದ್ ಅವರ ಮರಣದ ಬಳಿಕ ಅಬೂಬಕರ್, ಉಮರ್‌ಬಿನ್ ಖತ್ತಾಬ್, ಉಸ್ಮಾನ್ ಬಿನ್ ಅಫ್ಘಾನ್ ಹಾಗೂ ಅಲೀ ಬಿನ್ ಅಬೀತಾಲಿಬ್ ಅರೇಬಿಯಾದಲ್ಲಿ ಆಳ್ವಿಕೆ ನಡೆಸುತ್ತಾರೆ. ಇವರ ಆಡಳಿತವು ಖಲೀಫಾ ಆಡಳಿತ ಎಂದೇ ಖ್ಯಾತಿಗಳಿಸಿತ್ತು. ಇವರ ಆಡಳಿತ ಕೊನೆಗೊಂಡ ಬಳಿಕ ಮುಆವಿಯಾ ಎಂಬವರು ಅಧಿಕಾರಕ್ಕೇರುತ್ತಾರೆ. ಮುಆವಿಯಾ ಪ್ರಜಾಸತ್ತಾತ್ಮಕ, ಸರ್ವ ಧರ್ಮಕ್ಕೂ ಸಮಾನತೆ ಸಾರುವ ಆಡಳಿತವನ್ನು ನಡೆಸಿ ಇತರರಿಗೆ ಮಾದರಿಯಾಗುತ್ತಾರೆ.

