ಶಿವಮೊಗ್ಗ: ಶಿವಮೊಗ್ಗದಿಂದ ಚೆನ್ನೈಗೆ ವಿಮಾನ ಸೇವೆ ಆಗಸ್ಟ್ 15ರಿಂದ ಆರಂಭವಾಗಲಿದೆ ಎಂದು ಸಂಸದ ಬಿವೈ ರಾಘವೇಂದ್ರ ತಿಳಿಸಿದ್ದಾರೆ. ಜತೆಗೆ, ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೆ ಸ್ಪೈಸ್ ಜೆಟ್ ಏರ್​​ಲೈನ್ಸ್ ವಾರಕ್ಕೊಮ್ಮೆ ವಿಮಾನಯಾನ ಸೇವೆ ಒದಗಲಿಸಲಿದೆ. ಶಿವಮೊಗ್ಗ ಚೆನ್ನೈ ವಿಮಾನ ಸೇವೆ ಬಗ್ಗೆ ಸಂಸದ ರಾಘವೇಂದ್ರ ಸಾಮಾಜಿಕ ಮಾಧ್ಯಮ ಎಕ್ಸ್​ ಮೂಲಕ ಮಾಹಿತಿ ನೀಡಿದ್ದಾರೆ.

ಶಿವಮೊಗ್ಗದಿಂದ ಚೆನ್ನೈಗೆ ಆಗಸ್ಟ್ 15ರಿಂದ ವಿಮಾನಯಾನ ಸೇವೆ ಪ್ರಾರಂಭವಾಗಲಿದೆ. ಚೆನ್ನೈ ವಿಮಾನ ಹಾರಾಟದ ಜೊತೆಗೆ ವಾರದಲ್ಲಿ ಒಂದು ದಿನ ಹೈದರಾಬಾದ್ ಸೇರಿದಂತೆ ಪ್ರಮುಖ ನಗರಗಳಿಗೂ ಸ್ಟೈಸ್ ಜೆಟ್ ವಿಮಾನ ಹಾರಾಟ ನಡೆಸಲಿದೆ. ಮೋಡ ಮುಸುಕಿದ ವಾತಾವರಣ ಮತ್ತು ರಾತ್ರಿ ವೇಳೆಯಲ್ಲೂ ವಿಮಾನ ಲ್ಯಾಂಡಿಂಗ್ ಆಗುವಂತಹ ವ್ಯವಸ್ಥೆಯನ್ನು ತ್ವರಿತವಾಗಿ ಮಾಡುವಂತೆ ವಿಮಾನ ನಿಲ್ದಾಣದ ನಿರ್ವಹಣಾ ಸಂಸ್ಥೆಗೆ ಪತ್ರ ಬರೆಯಲಾಗಿದೆ.

ಕುವೆಂಪು ವಿಮಾನ ನಿಲ್ದಾಣ ಎಂದೂ ಕರೆಯಲ್ಪಡುವ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಪ್ರಸ್ತುತ ನಾಲ್ಕು ಸ್ಥಳಗಳಿಗೆ ವಿಮಾನ ಸೇವೆ ಲಭ್ಯವಿದೆ. ಶಿವಮೊಗ್ಗದಿಂದ ಬೆಂಗಳೂರು (ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ), ಹೈದರಾಬಾದ್ (ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ) ಗೋವಾ (ಮೋಪಾ ವಿಮಾನ ನಿಲ್ದಾಣ) ಮತ್ತು ತಿರುಪತಿಗೆ ವಿಮಾನ ಸೇವೆ ಲಭ್ಯವಿದೆ.