ಶಿವಮೊಗ್ಗ: ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಕೆಲವೇ ಕ್ಷಣಗಳಲ್ಲಿ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿರುವ ಘಟನೆ ಹೊಸನಗರ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಶನಿವಾರ ರಾತ್ರಿ ನಡೆದಿದೆ.
ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ದ್ಯಾಮ್ಲಾಪುರ ಗ್ರಾಮದ ಶ್ರೀಕಾಂತ್ ತಮ್ಮ ತಂಗಿಯ ಮದುವೆಯ ಹಿನ್ನಲೆಯಲ್ಲಿ ತಮ್ಮ ದೊಡ್ಡಪನವರಾದ ಗಂಗಾಧರಗೌಡ ಎಂಬುವವರೊಂದಿಗೆ ವಿವಾಹ ಆಮಂತ್ರಣ ಪತ್ರಿಕೆ ನೀಡಲು ಮಾರುತಿ ಓಮ್ನಿ ಕಾರಿನಲ್ಲಿ ಶಿವಮೊಗ್ಗಕ್ಕೆ ತೆರಳಿ ಹಿಂದಿರುಗುತಿದ್ದ ವೇಳೆಯಲ್ಲಿ ಬೆಳ್ಳೂರು ಗ್ರಾಮದ ಮುಖ್ಯ ರಸ್ತೆಯಲ್ಲಿವೈರ್ ಶಾರ್ಟ್ ಸರ್ಕ್ಯೂಟ್ ಆಗಿ ಮೊದಲು ಹೊಗೆ ಕಾಣಿಸಿಕೊಂಡಿದ್ದು, ಬಳಿಕ ಕ್ಷಣಾರ್ಧದಲ್ಲಿ ಬೆಂಕಿ ಜ್ವಾಲೆಗಳು ಎದ್ದಿವೆ. ಕೂಡಲೇ ಇಬ್ಬರು ಹೊರಗೆ ಇಳಿದು ಓಡಿದ್ದಾರೆ. ನಂತರ ನೋಡನೋಡುತಿದ್ದಂತೆ ಬೆಂಕಿ ಕಾರಿನನ್ನೆಲ್ಲಾ ಆವರಿಸಿ, ಕಣ್ಣೆದುರೇ ಕಾರು ಹಾಗೂ ಕಾರಿನಲ್ಲಿದ್ದ ತರಕಾರಿ , ಸೀರೆ ಮತ್ತು ಬಟ್ಟೆಗಳು ಸುಟ್ಟು ಭಸ್ಮವಾಗಿದೆ.
ರಸ್ತೆ ಮಧ್ಯದಲ್ಲಿಯೇ ಧಗಧಗನೆ ಹೊತ್ತಿ ಉರಿದ ಕಾರಿನ ದೃಶ್ಯವನ್ನು ಕಂಡು ಸ್ಥಳೀಯರು ತತ್ ಕ್ಷಣವೇ ಸಹಾಯಕ್ಕೆ ಧಾವಿಸಿದ್ದು, ಬೆಂಕಿ ಆರಿಸಲು ಪ್ರಯತ್ನಿಸಿದ್ದಾರೆ. ಆದರೆ ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಕಾರು ಸಂಪೂರ್ಣವಾಗಿ ಸುಟ್ಟುಹೋಗಿದೆ.ಸ್ಥಳಕ್ಕೆ ರಿಪ್ಪನ್ ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

