ಶಿವಮೊಗ್ಗ: ಪ್ರತಿಭಾ ಕಾರಂಜಿ ಕಾರ್ಯಕ್ರಮದ ಆರಂಭದಲ್ಲಿ ಯೇಸುವಿನ ಪ್ರಾರ್ಥನೆ ಮಾಡಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಾಸೂರು ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.

ಕಳೆದ 13 ರಂದು ಮಾಸೂರು ಪ್ರೌಢಶಾಲೆಯಲ್ಲಿ ನಡೆದಿದ್ದ ಕಾರ್ಯಕ್ರಮದ ಆರಂಭದಲ್ಲಿ ಪ್ರಾರ್ಥನಾ ಗೀತೆಯಾಗಿ ಯೇಸುವಿನ ಗೀತೆ ಹಾಡಿಸಿದ ಆರೋಪ ಶಾಲೆಯ ವಿಜ್ಞಾನ ಶಿಕ್ಷಕ ಫ್ರಾಂಕಿ ಫ್ರಾನ್ಸಿಸ್ ವಿರುದ್ದ ಕೇಳಿ ಬಂದಿದೆ.

ಯೇಸುವಿನ ಗೀತೆ ಹಾಡಿಸಿದ್ದಕ್ಕೆ ವಿಶ್ವ ಹಿಂದೂ ಪರಿಷತ್, ಬಜರಂಗದಳ ಆಕ್ಷೇಪ ವ್ಯಕ್ತಪಡಿಸಿದ್ದು, ಶಾಲೆಯಲ್ಲಿ ಒಬ್ಬನೇ ಒಬ್ಬ ಕ್ರಿಶ್ಚಿಯನ್ ವಿದ್ಯಾರ್ಥಿ ಇಲ್ಲ, ಹೀಗಿರುವಾಗ ಯೇಸುವಿನ ಗೀತೆ ಏಕೆ ಹಾಡಿಸಿದರು ಎಂದು ಪ್ರಶ್ನಿಸಲಾಗಿದೆ.

ಈ ಘಟನೆ ಮೂಲಕ ಹಿಂದುಗಳ ಭಾವನೆಗೆ ಶಿಕ್ಷಕ ಧಕ್ಕೆ ಉಂಟು ಮಾಡಿದ್ದಾರೆ. ಈ ಕೂಡಲೇ ಶಿಕ್ಷಕನನ್ನು ಅಮಾನತು ಮಾಡುವಂತೆ ಆಗ್ರಹಿಸಿ ಸಾಗರದ ಬಿಇಒ ಕಚೇರಿ ಎದುರು ವಿ ಹೆಚ್ ಪಿ ಹಾಗೂ ಬಜರಂಗದಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.