ಶಿವಮೊಗ್ಗ: ತ್ಯಾವರೆಕೊಪ್ಪ ಹುಲಿ ಮತ್ತು ಸಿಂಹ ಸಫಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪಶುವೈದ್ಯೆಯೊಬ್ಬರು ನೀರಾನೆ ದಾಳಿಯಿಂದ ಮೃತಪಟ್ಟಿದ್ದಾರೆ.

ಬೆಂಗಳೂರು ಮೂಲದ ಡಾ. ಸಮೀಕ್ಷಾ ರೆಡ್ಡಿ (27) ಮೃತ ದುರ್ದೈವಿ. ಇವರು ಸಫಾರಿಯಲ್ಲಿ ಪಶುವೈದ್ಯ ಅಧಿಕಾರಿಯಾಗಿ ಇತ್ತೀಚೆಗಷ್ಟೇ ಆಯ್ಕೆಯಾಗಿ ತರಬೇತಿ ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ.

ಗುರುವಾರ ರಾತ್ರಿ ಸುಮಾರು 10:30ರ ವೇಳೆಗೆ, ಡಾ. ಸಮೀಕ್ಷಾ ಅವರು ಸನ್ ಕಾನರ್ ಪಕ್ಷಿಯ ಚಿಕಿತ್ಸೆಗಾಗಿ ಮೃಗಾಲಯದ ಆಸ್ಪತ್ರೆಗೆ ತೆರಳಿದ್ದರು. ಬಳಿಕ ರಾತ್ರಿ 11:45ರ ಸುಮಾರಿಗೆ, ಮೃಗಾಲಯದ ಆವರಣದಲ್ಲಿದ್ದ ಗರ್ಭಿಣಿ ನೀರಾನೆಯ ದೇಹದ ಉಷ್ಣತೆಯನ್ನು ಥರ್ಮಲ್ ಕ್ಯಾಮೆರಾ ಮೂಲಕ ಪರೀಕ್ಷಿಸಲು ಅದರ ಆವರಣದ ಒಳಗೆ ಪ್ರವೇಶಿಸಿದ್ದಾರೆ. ಈ ವೇಳೆ ನೀರಾನೆ ಹಠಾತ್ತಾಗಿ ಅವರ ಮೇಲೆ ದಾಳಿ ಮಾಡಿದೆ.

ಗರ್ಭಿಣಿ ನೀರಾನೆ ತೀವ್ರ ಆಕ್ರೋಶದಿಂದ ದಾಳಿ ಮಾಡಿದ ಪರಿಣಾಮ ಡಾ. ಸಮೀಕ್ಷಾ ಅವರಿಗೆ ಗಂಭೀರ ಗಾಯಗೊಂಡಿದ್ದು, ತಕ್ಷಣವೇ ಅವರನ್ನು ಶಿವಮೊಗ್ಗದ ಮ್ಯಾಕ್ಸ್‌ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾ.20ರ ಶುಕ್ರವಾರ ಬೆಳಿಗ್ಗೆ 6:30ರ ಸುಮಾರಿಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.