ಶಿವಮೊಗ್ಗ: ರಾಜ್ಯದಲ್ಲಿ ಭಾರೀ ಮಳೆಯಿಂದಾಗಿ ನೀರಿನ ಮಟ್ಟ ಹೆಚ್ಚಿದ್ದು, ಇದರಿಂದ ಲಿಂಗನಮಕ್ಕಿ ಜಲಾಶಯಕ್ಕೆ ಒಳ ಹರಿವು ಹೆಚ್ಚಳವಾಗಿದೆ. ಹೀಗಾಗಿ ಇಂದಿನಿಂದ ಹಸಿರುಮಕ್ಕಿ ಲಾಂಚ್ ಪುನರ್ ಆರಂಭಗೊಂಡಿದೆ.

ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಿಂದ ಮಾಹಿತಿ ಹೊರಡಿಸಿದ್ದು, ಶರಾವತಿ ಹಿನ್ನಿರಿನ ಹಸಿರುಮಕ್ಕಿಯಲ್ಲಿ ಲಾಂಚ್ ಸೇವೆ ಇಂದಿನಿಂದ ಪುನರ್ ಆರಂಭ ಎಂದು ಹೇಳಿದೆ. ಲಿಂಗನಮಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕುಸಿದ ಕಾರಣ ಶರಾವತಿ ಹಿನ್ನೀರಿನಲ್ಲಿ ಲಾಂಚ್ ಸೇವೆ ಸ್ಥಗಿತಗೊಂಡಿತ್ತು‌.

ಲಾಂಚ್ ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕಳೆದ ಒಂದು ತಿಂಗಳಿಂದ ಸ್ಥಗಿತಗೊಂಡಿತ್ತು. ನಿಟ್ಟೂರು ಭಾಗದ ಜನರು ಸೇರಿದಂತೆ ಸಾಗರದಿಂದ ಕೊಲ್ಲೂರು, ಕುಂದಾಪುರ ತೆರಳುವವರಿಗೆ ಸಾಕಷ್ಟು ಅನಾನುಕೂಲವಾಗಿತ್ತು. ಸದ್ಯ ಲಾಂಚ್ ಸೇವೆ ಆರಂಭದಿಂದ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.