ಶಿವಮೊಗ್ಗ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಖಾಸಗಿ ಬಸ್ ಧಗಧಗನೇ ಹೊತ್ತಿ ಉರಿದ ಘಟನೆ ಶಿವಮೊಗ್ಗದ ಹೊಸನಗರ ತಾಲೂಕಿನ ಮಾಸ್ತಿಕಟ್ಟೆ ಬಳಿಯ ಹುಲಿಕಲ್ ಘಾಟ್‌ನಲ್ಲಿ ಘಟನೆ ನಡೆದಿದೆ.

ಅಗ್ನಿ ಅವಘಡದಲ್ಲಿ 17 ಜನ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಶಾರ್ಟ್ ಸರ್ಕ್ಯೂಟ್ ಆಗುತ್ತಿದ್ದಂತೆ ಪ್ರಯಾಣಿಕರನ್ನ ಚಾಲಕ ಹಾಗೂ ನಿರ್ವಾಹಕ ಕೆಳಗಿಳಿಸಿದ್ದಾರೆ. ನೋಡ ನೋಡುತ್ತಿದ್ದಂತೆ ಖಾಸಗಿ ಬಸ್ ಸಂಪೂರ್ಣ ಸುಟ್ಟು ಹೋಗಿದೆ.

ಬಸ್ ಶಿವಮೊಗ್ಗದ ಹುಲಿಕಲ್‌ನಿಂದ ಉಡುಪಿಗೆ ತೆರಳುತ್ತಿತ್ತು. ಹುಲಿಕಲ್ ಘಾಟ್ ಕುಸಿತದ ನಂತರ ಬಸ್‌ಗಳು ಕನೆಕ್ಟಿಂಗ್ ಆಗಿ ಕಾರ್ಯನಿರ್ವಹಿಸುತ್ತಿತ್ತು. ಹುಲಿಕಲ್‌ನಿಂದ ಹೊರಟ ಬಸ್ ಕೆಲವು ಕಿ.ಮೀ ಸಾಗುವಷ್ಟರಲ್ಲೇ ಅಗ್ನಿ ಅವಘಡ ಸಂಭವಿಸಿದೆ.

ಘಟನಾ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿ ಅವಘಡದಿಂದ ಹುಲಿಕಲ್ ಘಾಟ್‌ನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.