ಅಮೇರಿಕದ ಪೆನ್ಸಿಲ್ವೇನಿಯಾದ ಬಟ್ಲರ್ ಪ್ರದೇಶದಲ್ಲಿ ಜುಲೈ 13ರಂದು ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ವೇಳೆ ಅಮೇರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಟ್ರಂಪ್ ಅವರ ಬಲ ಕಿವಿಗೆ ಗಂಭೀರವಾದ ಗಾಯವಾಗಿತ್ತು. ಇದೀಗ ಡೊನಾಲ್ಡ್ ಟ್ರಂಪ್ ಅವರು ಹೀರೋನಂತೆ ಶತ್ರುಗಳ ಗುಂಡಿನ ದಾಳಿಯನ್ನು ಮೆಟ್ಟಿ ನಿಲ್ಲುವ AI ರಚಿತ ವಿಡಿಯೋವೊಂದು ಭಾರೀ ವೈರಲ್ ಅಗುತ್ತಿದ್ದು, ಎಲೋನ್ ಮಸ್ಕ್ ಕೂಡಾ ಈ ವಿಡಿಯೋಗೆ ಭಾರೀ ಮೆಚ್ಚುಗೆ ಸೂಚಿಸಿದ್ದಾರೆ.
AI ತಂತ್ರಜ್ಞಾನದ ಸಹಾಯದಿಂದ 1999 ರ ಹಾಲಿವುಡ್ ಹಿಟ್ ಮೂವಿ “ದಿ ಮ್ಯಾಟ್ರಿಕ್ಸ್”ನ ಸ್ಪೂಫ್ ವಿಡಿಯೋವನ್ನು ರಚಿಸಲಾಗಿದ್ದು, ಈ ವಿಡಿಯೋದಲ್ಲಿ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶತ್ರುಗಳ ದಾಳಿಯನ್ನು ಮೆಟ್ಟಿ ನಿಲ್ಲುವ ದೃಶ್ಯವನ್ನು ಕಾಣಬಹುದು. ಈ ಕುರಿತ ಪೋಸ್ಟ್ ಒಂದನ್ನು phsjr1 ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿತ್ತು. ಈ ಪೋಸ್ಟ್ ಅನ್ನು ಟೆಕ್ ಬಿಲಿಯನೇರ್ ಎಲೋನ್ ಮಸ್ಕ್ ರಿಪೋಸ್ಟ್ ಮಾಡಿದ್ದು, “ಇದು ಇಲ್ಲಿಯವರೆಗಿನ ಅತ್ಯುತ್ತಮ AI ವಿಡಿಯೋ ಆಗಿದೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
AI ವಿಡಿಯೋದಲ್ಲಿ ದಿ ಮ್ಯಾಟ್ರಿಕ್ಸ್ ಸಿನೆಮಾದ ನಾಯಕ ನಿಯೋನಂತೆ ಡೊನಾಲ್ಡ್ ಟ್ರಂಪ್ ಅವರನ್ನು ತೋರಿಸಲಾಗಿದೆ. ಹಾಗೂ ಜೋ ಬಿಡನ್, ಬರಾಕ್ ಒಬಾಮಾ ಮತ್ತು ಫೆಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರನ್ನು ವಿಲನ್ ಏಜೆಂಟ್‌ಗಳಂತೆ ತೋರಿಸಲಾಗಿದೆ. ಈ ವೈರಲ್ ವಿಡಿಯೋದಲ್ಲಿ ಡೊನಾಲ್ಡ್ ಟ್ರಂಪ್ ಹಿರೋನಂತೆ ಶತ್ರುಗಳ ದುಂಡಿನ ದಾಳಿಯಿಂದ ಪಾರಾಗುವ ದೃಶ್ಯವನ್ನು ಕಾಣಬಹುದು.

