ನವದೆಹಲಿ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಬುಧವಾರ ಬ್ಯಾಲಿಸ್ಟಿಕ್ ಮಿಸೈಲ್ ಡಿಫೆನ್ಸ್ ಸಿಸ್ಟಮ್‌ನ ಫೇಸ್-2ಕ್ಷಿಪಣಿಯ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ. ಒಡಿಶಾ ಕರಾವಳಿಯ ಚಾಂದಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಿಂದ ಈ ಪರೀಕ್ಷಾರ್ಥ ಉಡಾವಣೆ ನಡೆದಿದೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ರಕ್ಷಣಾ ಸಚಿವಾಲಯ, ಹಂತ-II ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಹಾರಾಟ-ಪರೀಕ್ಷೆ ಮಾಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಹಂತ-II ಬ್ಯಾಲಿಸ್ಟಿಕ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಯಶಸ್ವಿ ಹಾರಾಟ ಪರೀಕ್ಷೆಗಾಗಿ DRDO ವನ್ನು ಅಭಿನಂದಿಸಿದ್ದಾರೆ.
ಈ ಕ್ಷಿಪಣಿಯನ್ನು ನಿನ್ನೆ ಸಂಜೆ 4:24ಗಂಟೆಗೆ ಚಾಂಧಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ ನಿಂದ ಯಶಸ್ವಿ ಉಡಾವಣೆ ಮಾಡಲಾಯಿತು. ಕ್ಷಿಪಣಿ ಹಾರಾಟದ ಪರೀಕ್ಷೆಯ ಎಲ್ಲ ಹಂತಗಳು ನಿರೀಕ್ಷೆಯಂತೆ ನಡೆದವು. ಹಾರಾಟ ಮಾರ್ಗದ ಸಂಪೂರ್ಣ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ವಿವಿಧ ಸ್ಥಳಗಳಲ್ಲಿ ರಾಡಾರ್, ಎಲೆಕ್ಟ್ರೋ-ಆಪ್ಟಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಮತ್ತು ಟೆಲಿಮೆಟ್ರಿಯಂತಹ ಹಲವಾರು ಶ್ರೇಣಿ ಸಂವೇದಕಗಳನ್ನು ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

