ವಾಷಿಂಗ್ಟನ್‌: ಭಾರತ ಮೂಲದ ವಿಶ್ವವಿಖ್ಯಾತ ಗಗನಯಾತ್ರಿ ಸುನೀತಾ ವಿಲಿಯಮ್ಸ್‌  ಅವರು ಮೂರನೇ ಬಾರಿಗೆ ಬಾಹ್ಯಾಕಾಶ ಯಾನ ಕೈಗೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಆದರೆ, ಸುನೀತಾ ವಿಲಿಯಮ್ಸ್‌ ಹಾಗೂ ಮತ್ತೊಬ್ಬ ಗಗನಯಾತ್ರಿ ಬುಚ್ ವಿಲ್ಮೋರ್  ತಾಂತ್ರಿಕ ದೋಷದಿಂದಾಗಿ ಬಾಹ್ಯಕಾಶದಲ್ಲೇ ಸಿಲುಕಿದ್ದಾರೆ.

ಇದೀಗ ಈ ಬಗ್ಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ಮಹತ್ವದ ಸುದ್ದಿಯೊಂದನ್ನು ಹೊರಹಾಕಿದ್ದು, ಈ ಇಬ್ಬರು ಗಗನಯಾತ್ರಿಗಳನ್ನ ಹೊತ್ತೊಯ್ದಿದ್ದ ಬೋಯಿಂಗ್‌ನ ಸ್ಟಾರ್‌ಲೈನರ್ ಕ್ಯಾಪ್ಸುಲ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ  ಖಾಲಿಯಾಗಿ ಹಿಂದಿರುಗುತ್ತದೆ ಎಂದು ನಾಸಾ ಶನಿವಾರ ಘೋಷಿಸಿದೆ.

ಇತ್ತೀಚಿನ ಬೆಳವಣಿಗೆಯು ಬೋಯಿಂಗ್‌ನ ಸಂಕಟವನ್ನು ಹೆಚ್ಚಿಸಿದೆ. ಹೀಗಾಗಿ ಇದು ಖಾಲಿಯಾಗಿ ಹಿಂದಿರುಗುತ್ತಿದ್ದು, ಇದರ ಅಂದಾಜು ನಷ್ಟವು 1 ಬಿಲಿಯನ್ ಡಾಲರ್ ಮೀರಿದೆ ಎಂದು CNBC ವರದಿ ಮಾಡಿದೆ. ಗಗನಯಾತ್ರಿಗಳಾದ ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಈಗ ಐಎಸ್‌ಎಸ್‌ನಲ್ಲಿ ಆರು ತಿಂಗಳ ವಿಸ್ತೃತ ವಾಸ್ತವ್ಯದ ನಂತರ ಫೆಬ್ರವರಿ 2025 ರಲ್ಲಿ ಎಲೋನ್ ಮಸ್ಕ್‌ನ ಸ್ಪೇಸ್‌ಎಕ್ಸ್‌ನ ಕ್ರ್ಯೂ-9 ವಾಹನದಲ್ಲಿ ಹಿಂತಿರುಗುತ್ತಾರೆ. ಸ್ಟಾರ್‌ಲೈನರ್‌ನ ಥ್ರಸ್ಟರ್‌ಗಳೊಂದಿಗಿನ ಸಮಸ್ಯೆಗಳಿಂದಾಗಿ ಮೂಲ ಒಂಬತ್ತು ದಿನಗಳ ಪರೀಕ್ಷಾ ಹಾರಾಟವು ವಿಳಂಬವಾಗಿದೆ.