ಬೆಂಗಳೂರು: ದೇಶದ ಒಟ್ಟು ಸಾಫ್ಟ್‌ವೇರ್ ರಫ್ತು ವಲಯದಲ್ಲಿ ಕರ್ನಾಟಕ ರಾಜ್ಯವು ಭಾರಿ ಸಾಧನೆ ಮಾಡಿದ್ದು, ಶೇ. 41 ರಷ್ಟು ಪಾಲನ್ನು ಹೊಂದುವ ಮೂಲಕ ದೇಶದಲ್ಲೇ ಪ್ರಥಮ ಸ್ಥಾನವನ್ನು ಕಾಯ್ದುಕೊಂಡಿದೆ. ಅಷ್ಟೇ ಅಲ್ಲದೆ, ದೇಶದ ಒಟ್ಟು ರಫ್ತು ವಲಯದಲ್ಲೂ ಸಹ ಶೇ. 24 ರಷ್ಟು ಪಾಲನ್ನು ಪಡೆದುಕೊಂಡು ಮೊದಲ ಸ್ಥಾನದಲ್ಲಿ ಮುನ್ನಡೆಯುತ್ತಿದೆ.

ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಮಟ್ಟದ ರಫ್ತು ಉತ್ತೇಜನಾ ಸಮಿತಿ (ಎಸ್‌ಎಲ್‌ಇಪಿಸಿ) ಸಭೆಯಲ್ಲಿ ಈ ಮಹತ್ವದ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಇದೇ ವೇಳೆ ಮರ್ಚಂಡೈಸ್ ರಫ್ತು ವಲಯದಲ್ಲೂ ರಾಜ್ಯವು ಗಮನಾರ್ಹ ಪ್ರಗತಿ ಸಾಧಿಸಿದ್ದು, ಶೇ. 7.78 ರಷ್ಟು ಪಾಲಿನೊಂದಿಗೆ ಗುಜರಾತ್, ಮಹಾರಾಷ್ಟ್ರ ಮತ್ತು ತಮಿಳುನಾಡಿನ ನಂತರದ ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿದೆ. ಈ ಸಭೆಯಲ್ಲಿ ವರ್ಚುವಲ್ ಆಗಿ ಭಾಗವಹಿಸಿದ್ದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ದರ್ಶನ್ ಜೈನ್ ಅವರು, ರಾಜ್ಯದ ರಫ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ‘ರಫ್ತು ಉತ್ತೇಜನಾ ಮಿಷನ್’ ಮೂಲಕ ಸಿಗುತ್ತಿರುವ ಸೌಲಭ್ಯಗಳು ಮತ್ತು ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.

ದೇಶಾದ್ಯಂತ 120 ಆದ್ಯತಾ ಜಿಲ್ಲೆಗಳನ್ನು ಒಳಗೊಂಡ ‘ಡಿಸ್ಟ್ರಿಕ್ಟ್ ಎಕ್ಸ್‌ಪೋರ್ಟ್ ಹಬ್’ ಉಪಕ್ರಮದ ಅಡಿ ಮೊದಲ ಹಂತವಾಗಿ ಕರ್ನಾಟಕದ ಪ್ರಮುಖ 5 ಜಿಲ್ಲೆಗಳಾದ ಬೆಂಗಳೂರು ನಗರ, ಬೆಳಗಾವಿ, ಹಾಸನ, ಕೋಲಾರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಕೇವಲ ಬೆಂಗಳೂರು ಅಷ್ಟೇ ಅಲ್ಲದೆ ಇತರ ಜಿಲ್ಲೆಗಳಲ್ಲೂ ರಫ್ತು ಹೆಚ್ಚಿಸಲು ವಿಶೇಷ ಆದ್ಯತೆ ನೀಡಲಾಗುತ್ತಿದೆ. ಜವಳಿ, ಉಡುಪು, ರೇಷ್ಮೆ, ಚರ್ಮದ ವಸ್ತುಗಳು, ಕೃಷಿ ಮತ್ತು ಸಂಸ್ಕರಿಸಿದ ಆಹಾರಗಳು ಸೇರಿದಂತೆ ಹಲವು ವಲಯಗಳು ಕರ್ನಾಟಕದಲ್ಲಿ ವಿಶೇಷವಾಗಿ ಬೆಂಗಳೂರನ್ನು ಹೊರತುಪಡಿಸಿ ‘ಬಿಯಾಂಡ್ ಬೆಂಗಳೂರು’ ಪ್ರದೇಶದಲ್ಲಿ ಅತ್ಯಂತ ಹೆಚ್ಚಿನ ರಫ್ತು ಸಾಮರ್ಥ್ಯವನ್ನು ಹೊಂದಿವೆ ಎಂದು ಸಭೆಯಲ್ಲಿ ವಿವರಿಸಲಾಯಿತು.

ರಫ್ತುದಾರರಿಗೆ ನೆರವಾಗಲು ಹಲವು ಪ್ರಮುಖ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಬ್ಯಾಂಕುಗಳಿಗೆ ಗ್ಯಾರಂಟಿ ನೀಡುವುದು ಮತ್ತು ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಿಗೆ ಆವರ್ತಕ ನಿಧಿ ಒದಗಿಸುವ ಸೌಲಭ್ಯಗಳು ಇದರಲ್ಲಿ ಸೇರಿವೆ. ಜೊತೆಗೆ ವಿಮಾನ ನಿಲ್ದಾಣಗಳಲ್ಲಿ ಗೋದಾಮು ಸೌಲಭ್ಯ ಬಳಸಿಕೊಳ್ಳುವ ರಫ್ತುದಾರರಿಗೆ ಆರ್ಥಿಕ ನೆರವು ನೀಡಲಾಗುವುದು. ಬೆಂಗಳೂರು ಹೊರತುಪಡಿಸಿ ಉಳಿದ ಜಿಲ್ಲೆಗಳ ರಫ್ತುದಾರರಿಗೆ ಸಾರಿಗೆ ವೆಚ್ಚದ ಮೇಲೆ ಸಬ್ಸಿಡಿ ಸೌಲಭ್ಯ ಒದಗಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ಮಾತನಾಡಿ, ರಾಜ್ಯದಲ್ಲಿ ರಫ್ತು ಉತ್ತೇಜನಕ್ಕಾಗಿ ಮತ್ತು ಜಿ.ಇ.ಡಿ.ಎಚ್. ಉಪಕ್ರಮದ ನೋಡಲ್ ಸಂಸ್ಥೆಯಾದ ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ಅಗತ್ಯ ನಿರ್ದೇಶನಗಳನ್ನು ನೀಡಿದರು.