ನವದೆಹಲಿ: ಅಡುಗೆ ಅನಿಲ ಗ್ರಾಹಕರಿಗೆ (LPG) ಕೇಂದ್ರದಿಂದ ಮಹತ್ವದ ಮಾಹಿತಿ ಹೊರಬಿದ್ದಿದೆ. LPG ಇ-ಕೆವೈಸಿ (E-KYC) ಪೂರ್ಣಗೊಳಿಸಲು ನೀಡಲಾಗಿದ್ದ ಗಡುವನ್ನು ಆಗಸ್ಟ್ 23ರವರೆಗೆ ವಿಸ್ತರಿಸಲಾಗಿದೆ.
ಇ-ಕೆವೈಸಿ ಪೂರ್ಣಗೊಳಿಸಲು ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ವೆಬ್‌ಸೈಟ್‌ಗಳು ಹಾಗೂ ಮೊಬೈಲ್ ಆ್ಯಪ್‌ಗಳಿಗೆ ಭೇಟಿ ನೀಡುತ್ತಿರುವುದರಿಂದ ಸರ್ವರ್ ಸಮಸ್ಯೆ ಎದುರಾಗಿತ್ತು. ಇದರ ಜತೆಗೆ ಗ್ಯಾಸ್ ಏಜೆನ್ಸಿಗಳಲ್ಲೂ ಜನದಟ್ಟಣೆ ಹೆಚ್ಚಾಗಿತ್ತು. ಈ ಹಿನ್ನೆಲೆಯಲ್ಲಿ ಗಡುವು ವಿಸ್ತರಿಸಲಾಗಿದೆ.
ಇ-ಕೆವೈಸಿ ಮಾಡಿಸಿಕೊಳ್ಳಲು ಒಂದೇ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಗ್ರಾಹಕರು ಆನ್‌ಲೈನ್ ವ್ಯವಸ್ಥೆ ಬಳಸುತ್ತಿರುವುದರಿಂದ ಸರ್ವರ್ ಮೇಲೆ ಹೆಚ್ಚಿನ ಒತ್ತಡ ಉಂಟಾಗಿದೆ. ಪರಿಣಾಮವಾಗಿ ವೆಬ್‌ಸೈಟ್ ಮತ್ತು ಆ್ಯಪ್‌ಗಳಲ್ಲಿ ಪ್ರಕ್ರಿಯೆ ನಿಧಾನವಾಗುತ್ತಿರುವ ದೂರುಗಳು ಕೇಳಿಬಂದಿದ್ದವು.
ಆನ್‌ಲೈನ್‌ನಲ್ಲಿ ಕೆವೈಸಿ ಪೂರ್ಣಗೊಳಿಸಲು ಸಾಧ್ಯವಾಗದ ಹಲವು ಗ್ರಾಹಕರು ನೇರವಾಗಿ ಗ್ಯಾಸ್ ಏಜೆನ್ಸಿಗಳಿಗೆ ತೆರಳುತ್ತಿದ್ದಾರೆ. ಹೀಗಾಗಿ ಏಜೆನ್ಸಿಗಳ ಮುಂದೆ ಉದ್ದನೆಯ ಸರತಿ ಸಾಲುಗಳು ಕಂಡುಬಂದಿವೆ. ಕೆಲವೆಡೆ ಗ್ರಾಹಕರು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿಯೂ ನಿರ್ಮಾಣವಾಗಿತ್ತು.
ಗ್ರಾಹಕರಿಗೆ ತೊಂದರೆಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಇದೀಗ ಇ-ಕೆವೈಸಿ ಸಲ್ಲಿಕೆ ಅವಧಿಯನ್ನು ಆಗಸ್ಟ್ 23ರವರೆಗೆ ವಿಸ್ತರಿಸಲಾಗಿದೆ. ಹೀಗಾಗಿ ಗಡುವು ಮುಗಿಯುವ ಆತಂಕದಲ್ಲಿ ತಕ್ಷಣವೇ ಗ್ಯಾಸ್ ಏಜೆನ್ಸಿಗಳಿಗೆ ತೆರಳಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದು ಅಡುಗೆ ಅನಿಲ ಪೂರೈಕೆ ಕಂಪನಿಗಳು ಗ್ರಾಹಕರಿಗೆ ಮನವಿ ಮಾಡಿವೆ.
ಸರ್ವರ್ ಸಮಸ್ಯೆ ಕಡಿಮೆಯಾದ ಬಳಿಕ ಗ್ರಾಹಕರು ಆನ್‌ಲೈನ್ ಮೂಲಕ ಇ-ಕೆವೈಸಿ ಪೂರ್ಣಗೊಳಿಸಬಹುದು. ಗಡುವು ವಿಸ್ತರಣೆಯಿಂದಾಗಿ ಗ್ರಾಹಕರಿಗೆ ಹೆಚ್ಚುವರಿ ಸಮಯ ದೊರೆತಿದ್ದು, ಆತುರಪಡದೆ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ.

