ನವದೆಹಲಿ : ಭಾರತದಲ್ಲಿ ತಯಾರಿಸಲಾಗುವ ಪಿಕ್ಸೆಲ್ ಶ್ರೇಣಿಯ ಗೂಗಲ್ ಸ್ಮಾರ್ಟ್ಫೋನ್ಗಳನ್ನು ಮುಂದುವರಿದ ದೇಶಗಳಿಗೆ ರಫ್ತು ಮಾಡಲು ಗೂಗಲ್ ಸಂಸ್ಥೆ ಯೋಜಿಸಿದೆ. ಆ್ಯಪಲ್ನ ಐಫೋನ್ನಂತೆ ಗೂಗಲ್ ಪಿಕ್ಸಲ್ ಸ್ಮಾಟ್ಫೋನ್ಗಳೂ ಸದ್ಯದಲ್ಲೇ ಭಾರತದಲ್ಲಿ ತಯಾರಾಗಲಿವೆ. ಐಫೋನ್ ತಯಾರಿಸುವ ಫಾಕ್ಸ್ಕಾನ್ ಸಂಸ್ಥೆಯೇ ಗೂಗಲ್ ಪಿಕ್ಸೆಲ್ ಅನ್ನೂ ತಯಾರಿಸಿಕೊಡಲಿದೆ. ಡಿಕ್ಸಾನ್ ಟೆಕ್ನಾಲಜೀಸ್ನ ಉಪಸಂಸ್ಥೆಯಾದ ಪ್ಯಾಡ್ಜೆಟ್ ಎಲೆಕ್ಟ್ರಾನಿಕ್ಸ್ ಕೂಡ ಪಿಕ್ಸೆಲ್ ಉತ್ಪಾದನೆ ಮಾಡಲಿದೆ.
ವಿಶ್ವದ ಅತಿದೊಡ್ಡ ಗುತ್ತಿಗೆ ಆಧಾರಿತ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಕಂಪನಿಯಾದ ತೈವಾನ್ ಮೂಲದ ಫಾಕ್ಸ್ಕಾನ್ ತಮಿಳುನಾಡಿನಲ್ಲಿರುವ ತನ್ನ ಘಟಕದಲ್ಲಿ ಪಿಕ್ಸೆಲ್ ಫೋನ್ಗಳ ಪ್ರಾಯೋಗಿಕ ಉತ್ಪಾದನೆ ಆರಂಭಿಸಿದೆ.
ತೈವಾನ್ನ ಮತ್ತೊಂದು ಎಲೆಕ್ಟ್ರಾನಿಕ್ಸ್ ದೈತ್ಯ ಹಾಗೂ ವಿಶ್ವದ ಎರಡನೇ ಅತಿದೊಡ್ಡ ಲ್ಯಾಪ್ಟಾಪ್ ತಯಾರಕರಾದ ಕಾಮ್ಪಾಲ್ ಎಲೆಕ್ಟ್ರಾನಿಕ್ಸ್ ಸಂಸ್ಥೆಯೊಂದಿಗೆ ಡಿಕ್ಸಾನ್ ಒಪ್ಪಂದ ಮಾಡಿಕೊಂಡಿದ್ದು ಎರಡೂ ಜಂಟಿಯಾಗಿ ಸೇರಿ ಭಾರತದಲ್ಲಿ ಗೂಗಲ್ ಪಿಕ್ಸಲ್ ಸ್ಮಾರ್ಟ್ಫೋನ್ ತಯಾರಿಸಲಿವೆ. ಈ ವರ್ಷಾಂತ್ಯದೊಳಗೆ ಉತ್ಪಾದನೆ ಶುರುವಾಗುವ ನಿರೀಕ್ಷೆ ಇದೆ.

