ನವದೆಹಲಿ: ರಸ್ತೆಯಲ್ಲಿ ಚಲಿಸುತ್ತಿರುವ ಇ-ರಿಕ್ಷಾಗಳನ್ನು ರಿಮೋಟ್ ಕಂಟ್ರೋಲ್ ಮೂಲಕ ಅರ್ಧ ಹಾದಿಯಲ್ಲೇ ಇದ್ದಕ್ಕಿದ್ದಂತೆ ನಿಲ್ಲಿಸುತ್ತಿದ್ದ ಮೊಬೈಲ್ ಅಪ್ಲಿಕೇಶನ್‌ಗಳನ್ನು ಕೇಂದ್ರ ಸರ್ಕಾರ ಕೂಡಲೇ ಪ್ಲೇ ಸ್ಟೋರ್‌ಗಳಿಂದ ತೆಗೆದುಹಾಕುವಂತೆ ಸೂಚಿಸಿದೆ.
ಆಪ್ ಬಳಸಿ ಇ-ರಿಕ್ಷಾಗಳನ್ನು ನಡು ರಸ್ತೆಯಲ್ಲಿ ನಿಲ್ಲಿಸುತ್ತಿದ್ದ ಪ್ರಾಂಕ್ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಈ ಭದ್ರತಾ ಲೋಪವನ್ನು ಗಂಭೀರವಾಗಿ ಪರಿಗಣಿಸಿದ ಕೇಂದ್ರ ಸರ್ಕಾರ, ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆ್ಯಪ್ ಸ್ಟೋರ್‌ಗಳಿಂದ BAT-BMS, Lossigy ಮತ್ತು Epoch-i-ion ಎಂಬ ಚೀನಾ ಮೂಲದ ಆ್ಯಪ್‌ಗಳನ್ನು ತಕ್ಷಣವೇ ತೆಗೆದುಹಾಕಲು ಆದೇಶಿಸಿದೆ.
ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್. ಕೃಷ್ಣನ್ ಅವರು ಈ ಕುರಿತು ಮಾಹಿತಿ ನೀಡಿದ್ದು, ಸಾರ್ವಜನಿಕ ಸುರಕ್ಷತೆಗೆ ಧಕ್ಕೆ ತರುವ ಇಂತಹ ಆ್ಯಪ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ದೆಹಲಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಲಿಸುತ್ತಿದ್ದ ಇ-ರಿಕ್ಷಾಗಳು ಯಾವುದೇ ತಾಂತ್ರಿಕ ದೋಷವಿಲ್ಲದಿದ್ದರೂ, ರಸ್ತೆ ಮಧ್ಯದಲ್ಲೇ ಇದ್ದಕ್ಕಿದ್ದಂತೆ ಬಂದ್ ಆಗುತ್ತಿದ್ದವು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿಡಿಯೋಗಳಲ್ಲಿ ಯುವಕರು ತಮ್ಮ ಮೊಬೈಲ್‌ನಲ್ಲಿ ‘BAT-BMS’ ನಂತಹ ಆ್ಯಪ್ ಓಪನ್ ಮಾಡಿ, ರಸ್ತೆಯಲ್ಲಿ ಹೋಗುತ್ತಿದ್ದ ಇ-ರಿಕ್ಷಾಗಳನ್ನು ದೂರದಿಂದಲೇ ಆಫ್ ಮಾಡಿ ವಿಕೃತ ಆನಂದ ಪಡುತ್ತಿದ್ದರು.
ಈ ಆ್ಯಪ್‌ಗಳು ಮೂಲತಃ ಬ್ಯಾಟರಿಯ ವೋಲ್ಟೇಜ್ ಮತ್ತು ತಾಪಮಾನವನ್ನು ಮೇಲ್ವಿಚಾರಣೆ ಮಾಡಲು ಬಳಸುವ ಬ್ಯಾಟರಿ ಮ್ಯಾನೇಜ್‌ಮೆಂಟ್ ಸಿಸ್ಟಮ್ (BMS) ಭಾಗವಾಗಿ ಬಳಸಲಾಗುತ್ತಿತ್ತು. ಭಾರತದಲ್ಲಿ ಚಲಿಸುವ ಬಹುತೇಕ ಬಜೆಟ್ ಬೆಲೆಯ ಇ-ರಿಕ್ಷಾಗಳಲ್ಲಿ ಚೀನಾ ಮೂಲದ ಅಗ್ಗದ ಲಿಥಿಯಂ-ಅಯಾನ್ ಬ್ಯಾಟರಿಗಳನ್ನು ಬಳಸಲಾಗುತ್ತದೆ.
ಚೀನಾದ ಶೆನ್ಜೆನ್ ಗ್ರೆನರ್ಜಿ ಟೆಕ್ನಾಲಜಿ ಈ ಆಪ್ ಅಭಿವೃದ್ಧಿ ಪಡಿಸಿದ್ದು, ಈ ಬ್ಯಾಟರಿಗಳಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಇದ್ದು, ಅದಕ್ಕೆ ಯಾವುದೇ ಪಾಸ್‌ವರ್ಡ್ (Password) ಅಥವಾ ಸೆಕ್ಯೂರಿಟಿ ಅಥೆಂಟಿಕೇಶನ್ ಇಲ್ಲ. ಹೀಗಾಗಿ ರಿಕ್ಷಾದ 10 ರಿಂದ 15 ಮೀಟರ್ ವ್ಯಾಪ್ತಿಯಲ್ಲಿರುವ ಯಾರೂ ಬೇಕಾದರೂ ಈ ಆ್ಯಪ್‌ಗಳ ಮೂಲಕ ಬ್ಯಾಟರಿಗೆ ಕನೆಕ್ಟ್ ಆಗಬಹುದಿತ್ತು. ಕನೆಕ್ಟ್ ಆದ ತಕ್ಷಣ ಆ್ಯಪ್‌ನಲ್ಲಿರುವ ಡಿಸ್ಚಾರ್ಜ್ ಬಟನ್ ಆಫ್ ಮಾಡಿದರೆ ಬ್ಯಾಟರಿಯಿಂದ ಮೋಟಾರ್‌ಗೆ ಹೋಗುವ ವಿದ್ಯುತ್ ತಕ್ಷಣವೇ ಸ್ಥಗಿತಗೊಂಡು ರಿಕ್ಷಾ ರಸ್ತೆ ಮಧ್ಯದಲ್ಲೇ ನಿಲ್ಲುತ್ತಿತ್ತು.
ಈ ವಿಡಿಯೋಗಳು ಸೃಷ್ಟಿಸಿದ ಆತಂಕದ ಬೆನ್ನಲ್ಲೇ ದೆಹಲಿ ಸಾರಿಗೆ ಇಲಾಖೆಯೂ ತನಿಖೆಗೆ ಆದೇಶಿಸಿತ್ತು. ಸದ್ಯ ಕೇಂದ್ರ ಸರ್ಕಾರ ಈ ಅಪಾಯಕಾರಿ ಆ್ಯಪ್‌ಗಳನ್ನು ಬ್ಯಾನ್ ಮಾಡಿದ್ದು, ಇನ್ಮುಂದೆ ಇಂತಹ ಹಾನಿಕಾರಕ ಅಪ್ಲಿಕೇಶನ್‌ಗಳಿಗೆ ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅವಕಾಶ ನೀಡುವ ಮುನ್ನ ಗೂಗಲ್ ಮತ್ತು ಆಪಲ್ ಸಂಸ್ಥೆಗಳು ಹೆಚ್ಚಿನ ತಪಾಸಣೆ ನಡೆಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದೆ.

