News Karnataka Kannada
Monday, April 29 2024
ಸಂಪಾದಕರ ಆಯ್ಕೆ

ಶಕ್ತಿ’ ಯೋಜನೆ: ಮಹಿಳೆಯರಿಗೆ ಸಂತಸ, ಖಾಸಗಿ ಬಸ್ ಮಾಲೀಕರಿಗೆ ಪ್ರಾಣ ಸಂಕಟ!

Private Bus
Photo Credit :

ತುಮಕೂರು: ಒಂದೆಡೆ ರಾಜ್ಯ ಸರ್ಕಾರದ ’ಶಕ್ತಿ’ ಯೋಜನೆಯಿಂದ ಮಹಿಳೆಯರು ಸಂತಸಗೊಂಡು ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ತುಂಬಿ ತುಳುಕುವಂತೆ ಸಂಚರಿಸುತ್ತಿದ್ದಾರೆ. ಇನ್ನೊಂದೆಡೆ ಬಸ್ ಕಲೆಕ್ಷನ್ ನಂಬಿ ನೂರಾರು ಕುಟುಂಬಗಳಿಗೆ ಅನ್ನ ನೀಡುತ್ತಿದ್ದ ಖಾಸಗಿ ಬಸ್‌ಗಳ ಮಾಲೀಕರಿಗೆ ಸಂಕಟ ಎದುರಾಗಿದೆ.

ಹೌದು, ಕೋವಿಡ್ ನಂತರ ಕೊಂಚ ಚೇತರಿಕೆ ಕಾಣುವ ಹೊತ್ತಿನಲ್ಲಿ ’ಶಕ್ತಿ’ ಯೋಜನೆ ಖಾಸಗಿ ಬಸ್ ಮಾಲೀಕರಿಗೆ ಬರ ಸಿಡಿಲಿನಂತೆ ಎರಗಿದೆ. ಖಾಸಗಿ ಬಸ್‌ಗಳನ್ನೇ ನಂಬಿದ್ದ ಡ್ರೈವರ್, ಕಂಡಕ್ಟರ್, ಏಜೆಂಟರ್, ಕ್ಲೀನರ್, ಮ್ಯಕಾನಿಕ್‌ಗಳಿಗೆ ಮುಂದೇನು ಎನ್ನುವ ಆತಂಕ ಕಾಡುತ್ತಿದೆ. ಖಾಸಗಿ ಬಸ್ ನಂಬಿ ಬದುಕು ಕಟ್ಟಿಕೊಂಡಿದ್ದ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಮುನ್ನ ಸರ್ಕಾರ ನೆರವಿಗೆ ಧಾವಿಸಬೇಕು ಎಂಬ ಕೂಗು ಕೇಳಿಬರುತ್ತಿದೆ.

ಸರ್ಕಾರಿ ಬಸ್ ಸೌಲಭ್ಯಗಳೇ ಇಲ್ಲದ ಸಂದರ್ಭದಲ್ಲಿ ಬಸ್ ಸೌಲಭ್ಯ ಕಲ್ಪಿಸಿದ ಹೆಗ್ಗಳಿಗೆ ಖಾಸಗಿ ಬಸ್ ಮಾಲೀಕರದ್ದಾಗಿದೆ. ಇಲ್ಲಿಗೆ ಬರೋಬ್ಬರಿ ಎಪ್ಪತ್ತೈದು ವರ್ಷಗಳ ಹಿಂದೆಯೇ ಹುಳಿಯಾರಿನಿಂದ ತುಮಕೂರಿಗೆ ರಿಪಬ್ಲಿಕ್ ಬಸ್, ಗೋಪಾಲಕೃಷ್ಣ ಬಸ್, ಹುಳಿಯಾರು ಮಾರ್ಗವಾಗಿ ಚಿತ್ರದುರ್ಗದಿಂದ ಮೈಸೂರಿಗೆ ಸಿಟಿಸಿ ಬಸ್, ಅರಸೀಕರೆಯಿಂದ ಶಿರಾಗೆ ಹನುಮಾನ್ ಬಸ್, ತಿಪಟೂರಿಗೆ ಎಸ್‌ಆರ್‌ಎಸ್, ಬಸವೇಶ್ವರ, ಪ್ರಕಾಶ ಬಸ್, ತುಮಕೂರಿಗೆ ಶಹನಾಜ್, ಜಗಜ್ಯೋತಿ ಬಸವೇಶ್ವರ, ರಂಗನಾಥ ಬಸ್, ಚಿತ್ರದುರ್ಗಕ್ಕೆ ಕೊಟ್ರೇಶ್ವರ, ತಿಪ್ಪೇಸ್ವಾಮಿ ಬಸ್‌ಗಳನ್ನು ಓಡಿಸುವ ಮೂಲಕ ಸಾರ್ವಜನಿಕರಿಗೆ ಸಾರಿಗೆ ಸೌಕರ್ಯ ಕಲ್ಪಿಸಲಾಗಿತ್ತು. ನಂತರದ ದಿನಗಳಲ್ಲಿ ತಿಮ್ಮನಹಳ್ಳಿ ಗ್ರಾಮದ ಜಯಚಂದ್ರ ಅವರ ಸಿದ್ದೇಶ್ವರ ಬಸ್, ಸೀತರಾಮಣ್ಣ ಅವರ ಪ್ರಕಾಶ ಬಸ್, ಜಯರಾಮಣ್ಣ ಅವರ ಪ್ರಕಾಶ್ ಬಸ್, ಚಿದಾನಂದ್ ಅವರ ಪ್ರಕಾಶ್ ಬಸ್ ಬೆಂಗಳೂರಿಗೆ ಓಡಾಡಲು ಆರಂಭಿಸಿದವು.

ಈ ಬಸ್‌ಗಳ ಬೆನ್ನಿಗೆ ಹೊಸದುರ್ಗ ವಿಜಯಕುಮಾರ್ ಅವರ ವಿಜಯ, ಪರಮೇಶ್ವರಪ್ಪ ಅವರ ಕಲ್ಲೇಶ್ವರ, ಮಾಯಾಚಾರ್ ಅವರ ತ್ಯಾಗರಾಜ, ಆಬೀದ್ ಸಾಬ್ ಅವರ ಮಾರ್ಚೆಂಟ್, ನಂಜುಂಡಶೆಟ್ಟರ ಇಂಡಿಯನ್ ಎಕ್ಸ್‌ಪ್ರೆಸ್, ಹುಳಿಯಾರಿನ ಗೋವಿಂದರಾಜು, ಪ್ರದೀಪ್, ಪ್ರವೀಣ್ ಅವರ ಎಸ್‌ಎಲ್‌ಆರ್ ಬಸ್, ಆಲಂ, ಬಾಬು, ಅನ್ವರ್‌ಸಾಬ್, ಅವರ ಎಚ್.ಬಿ.ಟ್ಯಾವಲ್ಸ್, ಜಬೀಉಲ್ಲಾ ಅವರ ಎಸ್‌ಎಂಎಸ್, ದೇವಾನಂದ್ ಅವರ ವಿಜಯಾ ಬಸ್‌ಗಳು ಬೆಂಗಳೂರು ಮತ್ತು ಹೊಸದುರ್ಗ ಮಾರ್ಗದಲ್ಲಿ ಓಡಾಡುತ್ತಿದ್ದವು.

ಇವುಗಳ ಜೊತೆಜೊತೆಗೆ ಹಳ್ಳಿ ಮಾರ್ಗವಾಗಿ ಹೊಸದುರ್ಗದ ಪರಮೇಶ್ವರಪ್ಪ ಅವರ ಕಲ್ಲೇಶ್ವರ ಬಸ್, ತಿಮ್ಮನಹಳ್ಳಿ ರಂಗಪ್ಪ ಅವರ ಸಿದ್ದೇಶ್ವರ್ ಬಸ್, ಕೆಂಕೆರೆ ಚನ್ನಪ್ಪ ಅವರ ಚನ್ನಬಸವೇಶ್ವರ ಬಸ್, ದಸೂಡಿ ಕೊಟ್ಟಿಗೆ ರಂಗಪ್ಪ ಅವರ ರಂಗನಾಥ ಬಸ್, ಶಿರಾ ಮದ್ದಣ್ಣ ಅವರ ಹನುಮಾನ್ ಬಸ್, ಶಿರಾಶ್ಯಾಮಣ್ಣ ಅವರ ಭಗವಾನ್ ಬಸ್, ನೋಣವಿನಕೆರೆ ರಾಜಣ್ಣ ಅವರ ಮಂಜುನಾಥ ಬಸ್, ತಿಪಟೂರ್ ಅಬೀಬುಲ್ಲಾ ಶರೀಫ್‌ರವರ ಎಸ್‌ಎಂಎಸ್ ಬಸ್, ಆಜೀ ಮಹಮದ್ ನೂರುಲ್ಲಾ ಅವರ ರಿಲೆಬಲ್ ಬಸ್, ನರಸಿಂಹಣ್ಣ, ಕೆಂಚೇಗೌಡರ ಪ್ರಕಾಶ ಬಸ್, ಪರದೇಗೌಡರ ಎಸ್‌ಎಲ್‌ಎನ್‌ಎಸ್ ಬಸ್‌ಗಳು ಸಂಚರಿಸುತ್ತಿದ್ದವು.

ಸರ್ಕಾರದ ನೆರವು ಬಯಸದೆ ವಿದ್ಯಾರ್ಥಿಗಳಿಗೆ, ಸರ್ಕಾರಿ ನೌಕರರಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ಸೌಲಭ್ಯ ನೀಡಿದ ಶ್ರೇಯಸ್ಸು ಈ ಖಾಸಗಿ ಬಸ್‌ಗಳಿಗೆ ಸಲ್ಲುತ್ತದೆ. ಅಂಚೆ ಪತ್ರಗಳನ್ನು ತಲುಪಿಸುವ, ಹಾಲು, ಪೇಪರ್, ಹೂವು, ಔಷಧಿ ತಂದುಕೊಡುವ ಮೂಲಕ ನಾಗರಿಕ ಸೇವೆ ಮಾಡಿದ ಕೀರ್ತಿ ಇವರದಾಗಿದೆ. ಸರ್ಕಾರವೂ ಕೈಕಟ್ಟಿ ಕುಳಿತಿದ್ದ ಸಂದರ್ಭದಲ್ಲಿ ಸಾರಿಗೆ ಸೌಕರ್ಯ ನೀಡಿದ್ದ ಖಾಸಗಿ ಬಸ್ ಉದ್ಯಮ ಅನೇಕ ಏಳುಬೀಳುಗಳ ನಡುವೆಯೂ ತೆವಳುತ್ತಲೇ ಸಾಗುತ್ತಿತ್ತು.

ಆದರೆ ಮಹಾಮಾರಿ ಕೊರೊನಾ ಖಾಸಗಿ ಬಸ್ ವಲಯವನ್ನು ಅಲ್ಲೋಲ ಕಲ್ಲೋಲ ಮಾಡಿತ್ತು. ಕೊರೊನಾದಿಂದಾಗಿ ಬೆಂಗಳೂರಿಗೆ ನಿತ್ಯ ಓಡಾಡುತ್ತಿದ್ದ ಐವತ್ತಕ್ಕೂ ಹೆಚ್ಚು ಬಸ್‌ಗಳು ಏಕಾಏಕಿ ನಿಂತವು. ಹಳ್ಳಿ ಮಾರ್ಗವಾಗಿ ಓಡಾಡುತ್ತಿದ್ದ ಬಸ್‌ಗಳಿಗೆ ಡಿಸೆಲ್ ಬೆಲೆ ಏರಿಕೆ ಪೆಟ್ಟು ನೀಡಿತು.

ಈಗ ಸರ್ಕಾರದ ಉಚಿತ ಬಸ್ ಪಾಸ್ ಖಾಸಗಿ ಬಸ್ ಉದ್ಯಮವನ್ನೇ ಮಕಾಡೆ ಮಲಗಿಸಿ ಬಿಟ್ಟಿದೆ. ಸದ್ಯಕ್ಕಂತೂ ಈ ಉಚಿತ ಹೊಡೆತದಿಂದ ಪಾರಾಗುವ ಯಾವ ಲಕ್ಷಣಗಳೂ ಕಾಣಸಿಗದಿರುವುದು ಖಾಸಗಿ ಬಸ್ ವಲಯಲ್ಲಿ ಚಿಂತೆಗೀಡು ಮಾಡಿದೆ ಎನ್ನುತ್ತಾರೆ ಹಿರಿಯ ಬಸ್ ಏಜೆಂಟ್ ಲೋಕೇಶಣ್ಣ.

ಯಾವ ಮಾರ್ಗದಲ್ಲಿ ಖಾಸಗಿ ಬಸ್‌ಗಳ ಸಂಚಾರ ಇಲ್ಲವೋ ಅಲ್ಲಿ ಟಿಕೆಟ್ ದರ ಇಳಿಸದೆ ಖಾಸಗಿ ಬಸ್‌ಗಳು ಓಡಾಡುವ ಮಾರ್ಗದಲ್ಲಿ ಮಾತ್ರ ಸರ್ಕಾರಿ ಬಸ್‌ಗಳ ದರ ಇಳಿಸಲಾಗಿದೆ. ಖಾಸಗಿ ಬಸ್ ಸಮಯದ ಐದೈದು ನಿಮಿಷ ಹಿಂದೆಮುಂದೆ ಸರ್ಕಾರಿ ಬಸ್ ಬಿಟ್ಟಿದ್ದಾರೆ. ಈ ಅನಾರೋಗ್ಯಕರ ಪೈಪೋಟಿ ಖಾಸಗಿ ಬಸ್ ವಲಯದವರ ನಿದ್ದೆ ಕೆಡಿಸುತ್ತಿದೆ. ಇದರ ನಡುವೆ ’ಶಕ್ತಿ’ ಯೋಜನೆಯಿಂದ ಖಾಸಗಿ ಬಸ್ ಮಾಲೀಕರಿಗೆ ನಷ್ಟದ ಭೀತಿ ಎದುರಾಗಿದೆ. ಉಚಿತ ಪಯಾಣದ ಐದಾರು ದಿನಗಳ ಬಳಿಕವೇ ಹೀಗಾದರೆ ಮುಂದೆ ಹೇಗೆ ಎನ್ನುವ ಚಿಂತೆ ಕಾಡುತ್ತಿದೆ. ಸ್ಥಳೀಯವಾಗಿ ಎಪ್ಪತ್ತೈದು ವರ್ಷಗಳಿಂದ ನೂರಾರು ಮಂದಿಗೆ ಉದ್ಯೋಗ ಕಲ್ಪಿಸಿದ್ದ ಖಾಸಗಿ ಬಸ್‌ಗಳ ಸಂಚಾರ ನಿಂತರೆ ಅನೇಕ ಕುಟುಂಬಗಳು ಬೀದಿಗೆ ಬರುತ್ತವೆ. ಸರ್ಕಾರ ಈ ಬಗ್ಗೆ ನಿಗಾ ವಹಿಸಬೇಕು ಎನ್ನುತ್ತಾರೆ ಹಿರಿಯ ಬಸ್ ಏಜೆಂಟ್ ಹು.ಕೃ.ವಿಶ್ವನಾಥ್.

ಮಹಿಳೆಯರಿಗೆ ಉಚಿತ ಪ್ರಯಾಣದ ’ಶಕ್ತಿ’ ಯೋಜನೆ ಜಾರಿಯಾದ ದಿನಗಳಿಂದ ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಸಂಚರಿಸುವ ಮಾರ್ಗದಲ್ಲಿ ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣಕ್ಕೆ ಆದ್ಯತೆ ನೀಡಿದ ಪರಿಣಾಮ ಬಹುತೇಕ ಖಾಸಗಿ ಬಸ್‌ಗಳಲ್ಲಿ ಜನರೇ ಇರಲಿಲ್ಲ. ಬೆರಳೆಣಿಕೆಯ ಪುರುಷರು ಮಾತ್ರ ಕಂಡುಬಂದರು. ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚರಿಸದ ಗ್ರಾಮೀಣ ಮಾರ್ಗಗಳ ಖಾಸಗಿ ಬಸ್‌ಗಳಲ್ಲಿ ಮಾತ್ರ ಮಹಿಳೆಯರು ಪ್ರಯಾಣಿಸಿದ್ದು ಕಂಡುಬಂತು. ಶಿರಾ, ತಿಪಟೂರು ಮಾರ್ಗದಲ್ಲಿನ ಖಾಸಗಿ ಬಸ್‌ಗಳಲ್ಲಿ ಎಂದಿನಂತೆ ಕಾಣುತ್ತಿದ್ದ ದಟ್ಟಣೆಯೂ ಇರಲಿಲ್ಲ. ಪಂಚನಹಳ್ಳಿ, ಹಿರಿಯೂರು, ದಸೂಡಿ ಮಾರ್ಗದ್ದೂ ಇದೇ ಸ್ಥಿತಿ. ಖಾಸಗಿ ಬಸ್ ನಿಲ್ದಾಣದಲ್ಲಿ ಬಹುತೇಕ ಬಸ್‌ಗಳ ಏಜೆಂಟರು, ನಿರ್ವಾಹಕರು, ಚಾಲಕರು ಪ್ರಯಾಣಿಕರಿಲ್ಲದೇ ಬೇಸರಗೊಂಡಿದ್ದು ಕಾಣಸಿಕ್ಕಿತು.

ಒಂದು ಬಸ್ ನಂಬಿ 15 ರಿಂದ 20 ಜನರ ಜೀವನ ನಿರ್ವಹಣೆ ನಡೆಯುತ್ತದೆ. ಪ್ರಯಾಣಿಕರೇ ಇಲ್ಲದಿದ್ದರೆ ಬಸ್ ಓಡಿಸುವುದಾದರೂ ಹೇಗೆ ಎಂದು ಪ್ರಶ್ನೆ ಎದುರಾಗುತ್ತದೆ. ಒಂದು ಬಸ್‌ಗೆ ವರ್ಷಕ್ಕೆ 2 ಲಕ್ಷ ರೂ. ರಸ್ತೆ ಶುಲ್ಕ ಕಟ್ಟುತ್ತಾರೆ. ಪೆಟ್ರೋಲ್ ದರ, ಚಾಲಕರು, ನಿರ್ವಾಹಕರು ಸೇರಿ ಹಲವರ ವೇತನ, ಬಸ್ ನಿರ್ವಹಣೆ ಎಲ್ಲ ಸೇರಿ ಲಕ್ಷಾಂತರ ರೂಪಾಯಿ ಖರ್ಚು ಬರುತ್ತದೆ. ಒಟ್ಟಾರೆ ಸಂಕಷ್ಟದಲ್ಲಿ ಬದುಕು ದೂಡುತ್ತಿರುವ ಖಾಸಗಿ ಬಸ್‌ಗಳಲ್ಲಿ ಶೇ 50 ರಷ್ಟು ಸೀಟು ಕಡಿಮೆಯಾದರೆ ಬರುವ ಹಣದಲ್ಲಿ ಬಸ್ ನಿರ್ವಹಣ ಮಾಡಿ ಜೀವನ ನಿರ್ವಹಣೆ ಹಣ ಉಳಿಯೋದಿಲ್ಲ. ಹಾಗಾಗಿ ಸರ್ಕಾರ ಉಚಿತ ಬಸ್ ಪಾಸ್‌ನಿಂದಾಗಿ ಖಾಸಗಿ ಬಸ್ ವಲಯಕ್ಕೆ ಆಗಿರುವ ತೊಂದರೆಯನ್ನು ಮನಗಂಡು ಪರಿಹಾರದ ಮಾರ್ಗೋಪಾಯ ಕಂಡುಕೊಳ್ಳಬೇಕಿದೆ. ಇಲ್ಲವಾದರೆ ಒಂದು ಕಣ್ಣಿಗೆ ಬೆಣ್ಣೆ, ಮತ್ತೊಂದು ಕಣ್ಣಿಗೆ ಸುಣ್ಣ ಇದ್ಯಾವ ನ್ಯಾಯ ಎನ್ನುವಂತ್ತಾಗುತ್ತದೆ. ಅಲ್ಲದೆ ರಾಜ್ಯಾಧ್ಯಂತ ಖಾಸಗಿ ಬಸ್ ನಂಬಿರುವ ಲಕ್ಷಾಂತರ ಜನರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ.

ಮೂರು ತಿಂಗಳಿಗೆ ಒಮ್ಮೆ ಪ್ರತಿ ಬಸ್‌ಗೆ 50 ಸಾವಿರ ರೂ. ತೆರಿಗೆ ಕಟ್ಟಬೇಕು. ವರ್ಷಕ್ಕೆ 70 ಸಾವಿರದಿಂದ 1 ಲಕ್ಷ ರೂ. ವಿಮೆ. ಐದು ವರ್ಷಕ್ಕೆ ಒಮ್ಮೆ ಪರವಾನಗಿ ನವೀಕರಣ ಮಾಡಿಸಬೇಕು. ಮೂರ್ನಾಲ್ಕು ತಿಂಗಳಿಗೆ ಒಮ್ಮೆ ಟಯರ್ ಬದಲಿಸಬೇಕು. ಒಂದೊಂದು ಟಯರ್ ಬೆಲೆ ೨೨ ಸಾವಿರ ಇದೆ. ಚಾಲಕ, ನಿರ್ವಾಹಕ, ಕ್ಲೀನರ್, ನಿಲ್ದಾಣದ ಏಜೆಂಟರಿಗೆ ಕಮಿಷನ್, ವೇತನ ಪಾವತಿಸಬೇಕು. ಇದೆಲ್ಲ ಕಳೆದರೆ ಹಣ ಉಳಿಯುವುದೇ ಕಷ್ಟ. ಶಕ್ತಿ ಯೋಜನೆಯಿಂದ ಅನೇಕ ಕುಟುಂಬಗಳ ಬದುಕು ಬೀದಿಗೆ ಬೀಳಲಿದೆ. ಉಚಿತ ಕೊಡುಗೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವ ಮೂಲಕ ಸರ್ಕಾರವು ಖಾಸಗಿ ಬಸ್‌ಗಳ ನೆರವಿಗೆ ಬರಬೇಕು
-ಮಹಾಲಿಂಗಯ್ಯ, ಖಾಸಗಿ ಬಸ್ ಏಜೆಂಟ್, ಹುಳಿಯಾರು

ಕೊರೊನಾದಿಂದ ಎರಡು ವರ್ಷ ಪ್ರಯಾಣಿಕರಿಲ್ಲದೆ ಸಂಕಷ್ಟ ಎದುರಿಸಿದ್ದೇವೆ. ಅದರಿಂದ ಚೇತರಿಸಿಕೊಳ್ಳುತ್ತಿರುವಾಗಲೇ ಈಗ ಉಚಿತ ಪ್ರಯಾಣದ ಬರೆ ಬಿದ್ದಿದೆ. ಪ್ರಯಾಣಿಕರು ಬಾರದಿದ್ದರೆ ಬಸ್ ಓಡಿಸುವುದು ಕಷ್ಟ. ಒಂದು, ಎರಡು ಬಸ್ ಇರುವ ಮಾಲೀಕರು ಬಸ್ ಸಂಚಾರ ಸ್ಥಗಿತಗೊಳಿಸುವ ಆತಂಕ ಇದೆ. ಹೀಗಾದರೆ ನಮ್ಮಂತಹವರು ಏನು ಮಾಡುವುದು. ಈಗಲೇ ಅಲ್ಪಸ್ವಲ್ಪ ದುಡಿಮೆಯಿಂದ ಬದುಕು ಕಟ್ಟಿಕೊಂಡಿದ್ದೆವು. ಈಗ ಅದೂ ಸಿಗದ ಆತಂಕ ಎದುರಾಗಿದೆ. ಸರ್ಕಾರವೇ ಖಾಸಗಿ ಬಸ್ ಡ್ರೈವರ್, ಕಂಡಕ್ಟರ್, ಕ್ಲೀನರ್ ಹಾಗೂ ಏಜೆಂಟರುಗಳಿಗೆ ಸರ್ಕಾರಿ ಬಸ್‌ನಲ್ಲಿ ಕೆಲಸ ಕೊಟ್ಟು ನಮಗೆ ಆಸರೆ ನೀಡಬೇಕಿದೆ.
– ದಾದಾಪೀರ್, ಖಾಸಗಿ ಬಸ್ ಏಜೆಂಟ್, ಹುಳಿಯಾರು

ಮೊದಲೇ ಡಿಸೇಲ್, ಪೆಟ್ರೋಲ್ ದರ ಏರಿಕೆಯಾಗಿದೆ. ತೆರಿಗೆಯೂ ಹೆಚ್ಚಿದೆ. ಬಸ್ ದುರಸ್ತಿಗೆ ಬಂದರೆ ಒಂದಿಷ್ಟು ಖರ್ಚು. ಈಗ ಮಹಿಳಾ ಪ್ರಯಾಣಿಕರು ಬರುತ್ತಿಲ್ಲ. ಮುಂದೆ ಕುಟುಂಬದ ನಿರ್ವಹಣೆ ಹೇಗೆ ಎಂದು ತೋಚುತ್ತಿಲ್ಲ. ಸರ್ಕಾರ ಯೋಜನೆಗಳ ಜಾರಿಗೆ ಮುನ್ನ ಎಲ್ಲರನ್ನೂ ಗಣನೆಗೆ ತೆಗೆದುಕೊಳ್ಳಬೇಕಿತ್ತು. 70ವರ್ಷಗಳಿಂದ ಬಹುತೇಕ ಮಾರ್ಗಗಳಲ್ಲಿ ಖಾಸಗಿ ಬಸ್‌ಗಳೇ ಸಂಚರಿಸುತ್ತಿವೆ. ಇತ್ತೀಚಿಗೆ ಬಂದ ಇವರು ನಮ್ಮ ಹೊಟ್ಟೆ ಮೇಲೆ ಹೊಡೆಯುವುದು ಯಾವ ನ್ಯಾಯ. ನಮಗೆ ಆಗುತ್ತಿರುವ ನಷ್ಟಕ್ಕೆ ಸರ್ಕರ ಪರಿಹಾರ ಕೊಡಬೇಕು. ಇಲ್ಲವಾದರೆ ರಾಜ್ಯಾಧ್ಯಂತ ಹೋರಾಟಕ್ಕೆ ಧುಮುಕಲು ಚಿಂತನೆ ಮಾಡಬೇಕಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು