ಪಾಕಿಸ್ತಾನದಲ್ಲಿಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಖಜಾನೆ ಖಾಲಿಯಾಗಿದೆ. ಆರ್ಥಿಕತೆ ಪಾತಾಳಕ್ಕೆ ಕುಸಿದಿದೆ. ಜನರೂ ದೈನಂದಿನ ಆಹಾರಕ್ಕೂ ಪರದಾಡುವಂತಾಗಿದೆ. ಪೆಟ್ರೋಲ್ ದರ ಗಗನಕ್ಕೇರಿದೆ. ಇದಕ್ಕೆಲ್ಲ ಕಾರಣ ಅಲ್ಲಿನ ದುರಾಡಳಿತ. ತೀವ್ರ ಪ್ರವಾಹ ಸ್ಥಿತಿ ಕೊಡುಗೆ ನೀಡಿದೆ.
ಪಾಕ್ ಆರ್ಥಿಕ ಪರಿಸ್ಥಿತಿಯನ್ನು ನಿರ್ವಹಿಸಲು ಹಲವು ದೇಶಗಳ ಜೊತೆ ಸಾಲ ಮಾಡಿದೆ. ಚೀನಾ ಮತ್ತು ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಂತಹ ಗಲ್ಫ್ ರಾಷ್ಟ್ರಗಳಿಂದ ಸಾಲ ಪಡೆದುಕೊಂಡಿದೆ. ಪಾಕ್ ಚೀನಾದಿಂದ 500 ಕೋಟಿ ಡಾಲರ್ ಸಾಲ ಪಡೆದಿದೆ ಎನ್ನಲಾಗಿದೆ.
ಮುಂದುವರಿದ ಆರ್ಥಿಕ ಮತ್ತು ಆರ್ಥಿಕ ತೊಂದರೆಗಳ ಹಿನ್ನೆಲೆಯಲ್ಲಿ ವಿವಿಧ ಇಲಾಖೆಗಳ ಹಣಕಾಸು ಮತ್ತು ಸರ್ಕಾರಿ ನೌಕರರ ವೇತನ ಸಂಬಂಧಿ ಬಿಲ್ಗಳನ್ನು ತಡೆಹಿಡಿಯುವಂತೆ ಪಾಕಿಸ್ತಾನದ ಹಣಕಾಸು ಸಚಿವಾಲಯವು ದೇಶದ ಅಕೌಂಟೆಂಟ್ ಜನರಲ್ ರೆವೆನ್ಯೂಸ್ (ಎಜಿಪಿಆರ್) ಗೆ ನಿರ್ದೇಶನ ನೀಡಿದೆ. ಇದೇವೇಳೆ ವಿದೇಶಿ ವಿನಿಮಯ ಮೀಸಲು ಬರಿದಾಗಿದೆ.
ದುರಾಡಳಿತದಿಂದ ಈ ಸ್ಥಿತಿ: ಇಮ್ರಾನ್ ಖಾನ್ ಅವರ ಆಡಳಿತ ಅವಧಿಯಲ್ಲಿ ಹಣದುಬ್ಬರ, ನಿಯಂತ್ರಣವಿಲ್ಲದ ವೆಚ್ಚಗಳು ವಿದೇಶಿ ಮತ್ತು ಸ್ಥಳೀಯ ಸಾಲ ಹೆಚ್ಚಲು ಕಾರಣವಾಯಿತು ಎಂದು ಹಣಕಾಸು ಸಚಿವ ಇಶಾಕ್ ದಾರ್ ಜನವರಿ 28 ರಂದು ಇಸ್ಲಾಮಾಬಾದ್ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು. ಪ್ರಸ್ತುತದ ಸರ್ಕಾರದ ಹಲವು ಸಚಿವರು ಸೇರಿ ಪ್ರಮುಖರು ದೇಶದ ದುಸ್ಥಿತಿಗೆ ಇಮ್ರಾನ್ ಖಾನ್ ಪ್ರಮುಖ ಕಾರಣ ಎನ್ನುತ್ತಿದ್ದಾರೆ.
ಸರ್ಕಾರದ ಮೇಲೆ ಜನಪ್ರತಿನಿಧಿಗಳಿಗೆ ಹಿಡಿತವಿಲ್ಲ: ಪಾಕಿಸ್ತಾನದ ಸರ್ಕಾರದ ಮೇಲೆ ಜನಪ್ರತಿನಿಧಿಗಳಿಗೆ ಹಿಡಿತವಿಲ್ಲದ ಸ್ಥಿತಿಯಿದೆ. ಸರ್ಕಾರದ ಕೆಲ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ವೇಳೆ ಸೇನಾ ಮುಖ್ಯಸ್ಥರು ಮೇಲುಗೈ ಸಾಧಿಸಿರುವ ಹಲವು ಉದಾಹರಣೆಗಳಿವೆ. ಇನ್ನು ಉಗ್ರಗಾಮಿ ಸಂಘಟನೆಗಳೇ ಆಡಳಿತದ ಮೇಲೆ ಹಿಡಿತ ಹೊಂದಿರುವುದು ದೇಶ ಅಧಃಪತನಕ್ಕೆ ಸರಿಯಲು ಕಾರಣವಾಗಿದೆ.
ಉಗ್ರ ಮುಖಂಡರಿಗೆ ಆಶ್ರಯ ನೀಡಿ ಪೋಷಿಸಿದ ಪಾಕ್ ಈಗ ಅವರಿಂದಲೇ ತೊಂದರೆ ಅನುಭವಿಸುವುದಕ್ಕೆ ಸಾಕ್ಷಿಯಾಗಿದೆ.