ಹೊಸದಿಲ್ಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್ಬಿ) 11,356.84 ಕೋಟಿ ರೂಪಾಯಿ ಸಾಲ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿಯನ್ನು ಇಂಟರ್ಪೋಲ್ ತನ್ನ ‘ರೆಡ್’ ನೋಟಿಸ್ ಪಟ್ಟಿಯಿಂದ ತೆಗೆದುಹಾಕಿದೆ.
ಡಿಸೆಂಬರ್ 2018 ರಲ್ಲಿ ಚೋಕ್ಸಿಯನ್ನು ರೆಡ್ ನೋಟಿಸ್ ಪಟ್ಟಿಗೆ ಸೇರಿಸಲಾಗಿತ್ತು. ಮೂಲಗಳ ಪ್ರಕಾರ, ಭಾರತ ಸರ್ಕಾರಕ್ಕೆ ಸಂಬಂಧಿಸಿದ ಅಧಿಕಾರಿಗಳು ಇಂಟರ್ಪೋಲ್ನ ಕ್ರಮವನ್ನು ವಿರೋಧಿಸಿದ್ದರೂ ಆದರೆ ಇಂಟರ್ಪೋಲ್ ಅಧಿಕಾರಿಗಳು ಅವರ ವಿರೋಧವನ್ನು ಪರಿಗಣಿಸಿಲ್ಲ. ಈ ಮೂಲಕ ಅವರ ಗಡಿಪಾರಿಗೆ ಕಾಯುತ್ತಿದ್ದ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ)ಗೆ ಹಿನ್ನಡೆಯಾಗಿದೆ.
ಆದರೆ ಆಂಟಿಗುವಾದಿಂದ ಚೋಕ್ಸಿಯ ಹಸ್ತಾಂತರ ಪ್ರಕ್ರಿಯೆಗೆ ಹೆಚ್ಚು ಪರಿಣಾಮ ಬೀರುವುದಿಲ್ಲ ಎಂದು ವಿಷಯದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ. ಚೋಕ್ಸಿ ಪ್ರಸ್ತುತ ಕೆರಿಬಿಯನ್ ದ್ವೀಪ ರಾಷ್ಟ್ರದಲ್ಲಿದ್ದಾರೆ ಮತ್ತು ಭಾರತೀಯ ಅಧಿಕಾರಿಗಳು ಆತನನ್ನು ಹಸ್ತಾಂತರಿಸುವಂತೆ ಆಂಟಿಗ್ವಾನ್ ಅಧಿಕಾರಿಗಳನ್ನು ಕೇಳಿದ್ದಾರೆ.