ರಾಯಚೂರು: ಪೊಲೀಸ್ ಕ್ವಾಟರ್ಸ್​​ನಲ್ಲೇ ಕಳೆದ ಮೇ 22 ರಂದು, ರಾಯಚೂರು ನಗರದಲ್ಲಿ ಕಳ್ಳತನವಾಗಿತ್ತು. ರಾಯಚೂರಿನ ಪಶ್ಚಿಮ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಹೆಡ್​ ಕಾನ್ಸ್​ಟೇಬಲ್ ಮಹಾದೇವಿ ಎನ್ನುವವರ ಮನೆಯಲ್ಲಿ ಕಳ್ಳತನ ಮಾಡಿದ್ದರು.

ಮನೆಯಲ್ಲಿದ್ದ ಸುಮಾರು 10 ಲಕ್ಷ ರೂಪಾಯಿ ಹಣ ಲೂಟಿ ಮಾಡಲಾಗಿದೆ ಎಂದು ಹೆಡ್ ಕಾನ್ಸ್​ಟೇಬಲ್ ಮಹಾದೇವಿ ಅವರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ತನಿಖೆ ನಡೆಸಿದಾಗ ಮೂವರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಮಾರ್ಕೆಟ್ ಯಾರ್ಡ್ ಪೊಲೀಸರು ವಿಶ್ವನಾಥ್, ಗೋವಿಂದ ಹಾಗೂ ಮಹೇಶ್ ಎಂಬ ಮೂವರು ಆರೋಪಿಗಳನ್ನ ಬಂಧಿಸಿ ಸುಮಾರು 8 ಲಕ್ಷ ನಗದು ಹಣವನ್ನ ಜಪ್ತಿ ಮಾಡಿದ್ದಾರೆ.

ಬಳಿಕ ವಿಚಾರಣೆ ನಡೆಸಿದಾಗ ಈ ಆರೋಪಿಗಳು ಹೆಡ್ ಕಾನ್ಸ್​ಟೇಬಲ್ ಮಹಾದೇವಿ ಅವರ ಮನೆ ಎದುರು ನಡೆಯುತ್ತಿರುವ ಪೊಲೀಸ್ ವಸತಿ ನಿಲಯಗಳ ಹೊಸ ಕಟ್ಟಡದ ಕೆಲಸ ಮಾಡುವವರು ಎಂಬ ಮಾಹಿತಿ ತಿಳಿದು ಬಂದಿದೆ.

ಹೀಗಾಗಿ ಮೂವರು ಆರೋಪಿಗಳು ಮಹಾದೇವಿ ಅವರಿಗೆ ಪರಿಚಯವಾಗಿತ್ತು. ಪಾಪ ಬಡ ಹುಡುಗರು ಎಂದು ಉಪಹಾರ, ಟೀ, ಕಾಫಿ, ಊಟ ಕೊಡುತ್ತಿದ್ದರು. ನಿತ್ಯ ಒಂದಲ್ಲ ಒಂದು ರೀತಿ ಮಹಾದೇವಿ ಇವರಿಗೆ ಸಹಾಯ ಮಾಡುತ್ತಿದ್ದರು. ಈ ಮಧ್ಯೆ ಅವರ ಮನೆಯಲ್ಲಿ ಹಣವಿರುವ ಮಾಹಿತಿಯನ್ನ ಆರೋಪಿಗಳು ಪಡೆದು ಕನ್ನ ಹಾಕಿದ್ದಾರೆ.

ಮೇಡಂ ಮನೆಯಲ್ಲಿ ಯಾರೂ ಇಲ್ಲ ಎಂದರೂ ಅವರು ಸಾಕಿರುವ ಸೋನಿ, ಮೆಸ್ಸಿ ಎನ್ನುವ ಎರಡು ನಾಯಿಗಳು ಇರುತ್ತವೆ. ಅಪರಿಚಿತರು ಬಂದರೆ ಅವೇ ಸುಳಿವು ಕೊಡುತ್ತವೆ. ಆದರೆ, ಈ ಆರೋಪಿಗಳು ನಿತ್ಯ ಮನೆ ಬಳಿ ಬಂದು ಹೋಗ್ತಿದ್ದರಿಂದ ನಾಯಿಗಳು ಏನು ಮಾಡಿರ್ಲಿಲ್ಲ. ಆದರೂ ಬೀಗ ಒಡೆಯೋ ಟೈಂನಲ್ಲಿ ನಾಯಿಗಳು ಬೊಗಳಿದ್ದು, ಆಗ ಎರಡು ನಾಯಿಗಳಿಗೂ ಹೊಡೆದು ಮನೆಯೊಳಗೆ ಹೋಗಿದ್ದ ಆರೋಪಿಗಳು ಮನೆಯಲ್ಲಿದ್ದ ಲಕ್ಷ-ಲಕ್ಷ ನಗದನ್ನ ದೋಚಿ ಎಸ್ಕೇಪ್ ಆಗಿದ್ದರು.