ರಾಯಚೂರು: ಆನ್ಲೈನ್ ನಲ್ಲಿ ಸಾಲ ಕೊಡಿಸುವುದಾಗಿ ಹೇಳಿ ಜನರಿಂದ ಹಣ ವಸೂಲಿ ಮಾಡಿ ಮೋಸ ಮಾಡುತ್ತಿದ್ದ ತಂಡವನ್ನು ರಾಯಚೂರು ಸೈಬರ್ ಅಪರಾಧ ಪೊಲೀಸ್ ಠಾಣೆ ಅಧಿಕಾರಿಗಳು ಬಂಧಿಸಿರುವ ಘಟನೆ ನಡೆದಿದೆ.
ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಹಿಂಭಾಗದ ಲಕ್ಷಣ ಲೇಔಟ್ ನಲ್ಲಿ ವಾಸವಾಗಿದ್ದ ಮೂವರು ಆರೋಪಿಗಳು, ಜನರಿಗೆ ಆನ್ ಲೈನ್ ಮೂಲಕ ಸಾಲ ನೀಡುವುದಾಗಿ ನಂಬಿಸಿ ಅವರ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಸೇರಿದಂತೆ ಇತರೆ ದಾಖಲೆಗಳನ್ನು ಪಡೆದುಕೊಳ್ಳುತ್ತಿದ್ದರು.
ಬಳಿಕ ವಿವಿಧ ಕಂಪನಿಗಳ ಸಿಮ್ ಕಾರ್ಡ್ ಗಳನ್ನು ಬಳಸಿ ಕ್ಯೂಆರ್ ಕೋಡ್ ಸೃಷ್ಟಿಸಿ, ಜನರಿಂದ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಿಸಿಕೊಂಡು ಯಾವುದೇ ಸಾಲ ನೀಡದೇ ವಂಚಿಸುತ್ತಿದ್ದರು ಎಂದು ತಿಳಿದುಬಂದಿದೆ.
ಈ ಕುರಿತು ಖಚಿತ ಮಾಹಿತಿ ಆಧರಿಸಿ ಎ.21 ರಂದು ರಾಯಚೂರು ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಐಟಿ ಕಾಯ್ದೆ 2008ರ ಕಲಂ 66(D) ಹಾಗೂ BNS 2023ರ ಕಲಂ 318(4), 3(5) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಅವರ ಮಾರ್ಗದರ್ಶನದಲ್ಲಿ, ಸೈಬರ್ ಕ್ರೈಂ ಠಾಣೆಯ ಪ್ರಭಾರಿ ಡಿವೈಎಸ್ಪಿ ಶಾಂತವೀರ ಇ. ಅವರ ನೇತೃತ್ವದಲ್ಲಿ ದಾಳಿ ನಡೆಸಿ ಆರೋಪಿಗಳಾದ ಮಹೇಶ ಚಿಲ್ಲಾಳ (27), ವೀರೇಶ (24) ಹಾಗೂ ಪ್ರಭು (34) ಅವರನ್ನು ಬಂಧಿಸಲಾಗಿದೆ.
ಆರೋಪಿಗಳಿಂದ 8 ಮೊಬೈಲ್ ಫೋನ್ ಗಳು, ಸಿಮ್ ಕಾರ್ಡ್ ಗಳು, ಒಂದು ಕಾರು ಹಾಗೂ ಒಂದು ಬೈಕ್ ಜಪ್ತಿ ಮಾಡಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನ ವಿಧಿಸಲಾಗಿದೆ.

