ರಾಯಚೂರು: ಜಿಲ್ಲೆಯಲ್ಲಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬೆಳಗ್ಗೆ ತಿಂಡಿಗೆ ಮಾಡಿದ್ದ ಪಲಾವ್‌ನಲ್ಲಿ ಹಲ್ಲಿ ಬಿದ್ದಿದೆ. ಈ ಪಲಾವ್ ತಿಂದ 45 ಮಕ್ಕಳು ತೀರ್ವ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಬೆಳಗ್ಗೆ ಹಲ್ಲಿ ಬಿದ್ದ ಪಲಾವ್ ಸೇವಿಸಿ ಹಾಸ್ಟೆಲ್ ನ 45 ಮಕ್ಕಳು ಅಸ್ವಸ್ಥರಾಗಿದ್ದಾರೆ. ರಾಯಚೂರು ನಗರದ ಚಂದ್ರಬಂಡಾ ಹಾಸ್ಟೆಲ್ ನಲ್ಲಿ ಘಟನೆ ನಡೆದಿದೆ. ರಾಯಚೂರು ನಗರದ ಅಲ್ಪಸಂಖ್ಯಾತರ ಇಲಾಖೆಗೆ ಸೇರಿದ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಘಟನೆ ಸಂಭವಿಸಿದೆ. ತಿಂಡಿ ಸೇವನೆ ಮಾಡಿದ ಮಕ್ಕಳಿಗೆ ವಾಂತಿ ಭೇದಿ ಕಾಣಿಸಿಕೊಂಡಿದ್ದು, ಅಸ್ವಸ್ಥರಾಗಿ ಬಿದ್ದಿದ್ದಾರೆ. ಕೆಲ ಮಕ್ಕಳಿಗೆ ತಲೆ ಸುತ್ತು ಬಂದಿದ್ದು, ನಡೆಯಲು ಸಾಧ್ಯವಾಗದೇ ನರಳಾಡಿದ್ದಾರೆ.
ಕೂಡಲೇ ಎಚ್ಚೆತ್ತ ಹಾಸ್ಟೆಲ್ ಸಿಬ್ಬಂದಿ ಎಲ್ಲ ಮಕ್ಕಳನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಅಸ್ವಸ್ಥಗೊಂಡ ಮಕ್ಕಳ ಪೈಕಿ ಇಬ್ಬರು ಮಕ್ಕಳ ಸ್ಥತಿ ಗಂಭೀರವಾಗಿದೆ. ಮಾಹಿತಿ ತಿಳಿದು ಸ್ಥಳಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಪಂಚಾತಿಯಿ ಸಿಇಒ ರಾಹುಲ್ ಪಾಂಡ್ವೆ ಸ್ಥಳಕ್ಕೆ ಭೇಟಿ ನೀಡಿ ಮಕ್ಕಳ ಆರೋಗ್ಯ ಸ್ಥಿತಿಯ ಬಗ್ಗೆ ಪರಿಶೀಲನೆ ಮಾಡಿದ್ದಾರೆ.

