ರಾಯಚೂರು: ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರೊಂದಿಗೆ ಅಸಭ್ಯವಾಗಿ ವರ್ತಿಸಿದ ಯುವಕನಿಗೆ ಸಾರ್ವಜನಿಕರೆದುರೇ ಮಹಿಳೆ ಚಪ್ಪಲಿಯಿಂದ ಸರಿಯಾಗಿ ಧರ್ಮದೇಟು ನೀಡಿರುವ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ಪಟ್ಟಣದಲ್ಲಿ ನಡೆದಿದೆ.

ಲಿಂಗಸುಗೂರು ಬಸ್ ನಿಲ್ದಾಣದಲ್ಲಿ ಮಹಿಳೆಯೊಬ್ಬರು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದ ಸಂದರ್ಭದಲ್ಲಿ ಅಲ್ಲಿಗೆ ಬಂದ ಯುವಕನೋರ್ವ ಅವರೊಂದಿಗೆ ಅತ್ಯಂತ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಆಕೆಯ ಬಳಿ ಅಶ್ಲೀಲವಾಗಿ ಮಾತನಾಡಿದ್ದಾನೆ. ಇದರಿಂದ ತೀವ್ರ ಆಕ್ರೋಶಗೊಂಡ ಮಹಿಳೆ, ಆತನ ವರ್ತನೆಯನ್ನು ಸಹಿಸದೆ ತಕ್ಷಣವೇ ತನ್ನ ಕೈಯಲ್ಲಿದ್ದ ಚಪ್ಪಲಿಯನ್ನು ತೆಗೆದುಕೊಂಡು ಕೆನ್ನೆಗೆ ಬಾರಿಸಿ ತಕ್ಕ ಪಾಠ ಕಲಿಸಿದ್ದಾರೆ.

ಮಹಿಳೆ ಯುವಕನಿಗೆ ಹೊಡೆಯುತ್ತಿರುವುದನ್ನು ಗಮನಿಸಿದ ಬಸ್ ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ಕೂಡ ತಕ್ಷಣವೇ ಮಹಿಳೆಯ ನೆರವಿಗೆ ಧಾವಿಸಿದ್ದಾರೆ. ಅಸಭ್ಯವಾಗಿ ವರ್ತಿಸಿದ ಆ ಪುಂಡ ಯುವಕನಿಗೆ ಅಲ್ಲಿದ್ದ ಸಾರ್ವಜನಿಕರು ಸಹ ಮನಬಂದಂತೆ ಥಳಿಸಿದ್ದಾರೆ. ಜನರಿಂದ ಒದೆ ತಿನ್ನುತ್ತಿದ್ದಂತೆ ಹೆದರಿದ ಯುವಕ ತಕ್ಷಣವೇ ಬಸ್ ನಿಲ್ದಾಣದಿಂದ ಕಾಲ್ಕಿತ್ತು ಪರಾರಿಯಾಗಿದ್ದಾನೆ. ಪ್ರಕರಣ ಲಿಂಗಸುಗೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.