ರಾಯಚೂರು: ಯಾದಗಿರಿಯಲ್ಲಿ ಅನುಮಾನ್ಪದವಾಗಿ ಸಾವನ್ನಪ್ಪಿದ ಪಿಎಸ್ಐ ಪರಶುರಾಮ್ ಅವರ ಇಡೀ ಕುಟುಂಬಕ್ಕೆ ಇದೀಗ ಸಂತಸದ ದಿನ. ಏಕೆಂದರೆ ಮೃತ ಪರಶುರಾಮ್ ಪತ್ನಿ ಶ್ವೇತಾ ಅವರಿಗೆ ಹೆರಿಗೆ ಆಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಆಗಸ್ಟ್ 2ರಂದು ಪರಶುರಾಮ್ ಮೃತಪಟ್ಟಿದ್ದರೆ, ಸೆಪ್ಟೆಂಬರ್ 2ರಂದು ಅಂದರೆ ಅದೇ ದಿನಾಂಕದಂದು ಪತ್ನಿ ಶ್ವೇತಾ ಅವರು ಗಂಡು ಮಗುವಿಗೆ ಜನ್ಮ ನೀಡಿರುವುದು ಇನ್ನೊಂದು ವಿಶೇಷ. ಗಂಡು ಮಗುವಿನ ಆಗಮನದೊಂದಿಗೆ ಮತ್ತೆ ಪರಶುರಾಮನೇ ಹುಟ್ಟಿಬಂದಿದ್ದಾನೆಂದು ಇಡೀ ಕುಟುಂಬ ಖುಷಿಪಟ್ಟಿದೆ.
ಶ್ರೀ ದೇವಿಕಾ ಮೆಟರ್ನಿಟಿ ಆಸ್ಪತ್ರೆಯಲ್ಲಿ ಇಂದು ಶ್ವೇತಾಗೆ ಹೆರಿಗೆ ಆಗಿದೆ. ಪಿಎಸ್ಐ ಪರಶುರಾಮ್ ಮೃತಪಟ್ಟು ಇಂದಿಗೆ ಒಂದು ತಿಂಗಳಾಗಿದೆ. ಪರಶುರಾಮ ನಿಧನದಿಂದ ಇಡೀ ಕುಟುಂಬ ನೋವಿನಲ್ಲಿತ್ತು. ಇದೀಗ ಪರಶುರಾಮನೇ ಮತ್ತೆ ಹುಟ್ಟಿ ಬಂದಿದ್ದಾನೆಂದು ಕುಟುಂಬ ಖುಷಿಯಾಗಿದೆ. ಸದ್ಯ ಆಸ್ಪತ್ರೆಯಲ್ಲಿ ತಾಯಿ-ಮಗು ಇಬ್ಬರೂ ಸಹ ಆರೋಗ್ಯವಾಗಿದ್ದಾರೆ.

