ರಾಯಚೂರು: ಮಂತ್ರಾಲಯದಲ್ಲಿ ಗುರುರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವಕ್ಕೆ ಇಂದಿನಿಂದ ಚಾಲನೆ ದೊರೆಯಲಿದೆ. ಆ.27ರಿಂದ ಸೆ.2ರವರೆಗೆ ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಪ್ತರಾತ್ರೋತ್ಸವ ನಡೆಯಲಿದೆ.

ಇಂದು ಸಂಜೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಅವರಿಂದ ಧ್ವಜಾರೋಹಣ ನೆರವೇರಿಸುವ ಮೂಲಕ ಆರಾಧನಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ನೀಡಲಾಗುತ್ತದೆ. ಧ್ವಜಾರೋಹಣದ ಬಳಿಕ ಗೋ, ಗಜ, ಅಶ್ವ, ಧಾನ್ಯ ಹಾಗೂ ಲಕ್ಷ್ಮಿ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ.

ಆರಾಧನಾ ಮಹೋತ್ಸವದ ಪ್ರಮುಖ ಕಾರ್ಯಕ್ರಮಗಳಾದ ಪೂರ್ವಾರಾಧನೆ ಆ.29ರಂದು, ಮಧ್ಯಾರಾಧನೆ ಆ.30ರಂದು ಹಾಗೂ ಉತ್ತರಾರಾಧನೆ ಆ.31ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮಂತ್ರಾಲಯಕ್ಕೆ ದೇಶದ ವಿವಿಧ ಭಾಗಗಳಿಂದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುವ ನಿರೀಕ್ಷೆಯಿದೆ.

ಮಠದ ಆವರಣದಲ್ಲಿರುವ ಪರಿಮಳ ತೀರ್ಥ ಪುಷ್ಕರಣಿಯಲ್ಲಿ ಮೂರು ದಿನಗಳ ಕಾಲ ತೆಪ್ಪೋತ್ಸವವೂ ನಡೆಯಲಿದೆ. ಆರಾಧನಾ ಮಹೋತ್ಸವದ ಅಂಗವಾಗಿ ಆ.29ರಂದು ಸಾಧಕರಿಗೆ ‘ರಾಘವೇಂದ್ರ ಗುರು ಅನುಗ್ರಹ ಪ್ರಶಸ್ತಿ’ ಪ್ರದಾನ ಸಮಾರಂಭ ಆಯೋಜಿಸಲಾಗಿದೆ.

ಆ.31ರಂದು ಆರಾಧನಾ ಮಹೋತ್ಸವದ ಮತ್ತೊಂದು ಪ್ರಮುಖ ಆಕರ್ಷಣೆಯಾಗಿರುವ ಮಹಾರಥೋತ್ಸವ ನಡೆಯಲಿದೆ. ಈ ಸಂದರ್ಭದಲ್ಲಿ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಸುರಿಸುವ ಮೂಲಕ ಭಕ್ತರಿಗೆ ವಿಶೇಷ ಅನುಭವ ನೀಡಲಾಗುತ್ತದೆ. ಸೆ.2ರವರೆಗೆ ನಡೆಯಲಿರುವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಠದಲ್ಲಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.