ಹೊನ್ನಾವರ: ದಿನನಿತ್ಯದ ಗೋ ಕಳ್ಳತನದಿಂದ ರೋಸಿಹೋಗಿದ್ದ ಹತ್ತಾರು ಹಳ್ಳಿಗಳ ಯುವಕರು, ತಾವೇ ಖುದ್ದಾಗಿ ಕಾರ್ಯಾಚರಣೆಗಿಳಿದು ಐಷಾರಾಮಿ ಕಾರಿನಲ್ಲಿ ಗೋವುಗಳನ್ನು ಕದಿಯುತ್ತಿದ್ದವರನ್ನು ಸಿನಿಮೀಯ ರೀತಿಯಲ್ಲಿ ತಡೆದು ನಿಲ್ಲಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆ ಹೊನ್ನಾವರದ ಜಡ್ಡಿಗದ್ದೆ ಕ್ರಶರ್ ಕ್ರಾಸ್ ಬಳಿ ಬೆಳಗಿನ ಜಾವ ನಡೆದಿದೆ.

ಕಳೆದೊಂದು ವರ್ಷದಿಂದ ಈ ಭಾಗದಲ್ಲಿ ಗೋ ಕಳ್ಳರ ಹಾವಳಿ ಮಿತಿಮೀರಿತ್ತು. ಮೇವು ಮುಗಿಸಿ ಮನೆಗೆ ಬರಬೇಕಾದ ದನಗಳು ಕಾಣೆಯಾಗುತ್ತಿದ್ದವು. ಕಳ್ಳರು ಐಷಾರಾಮಿ ಕಾರುಗಳಲ್ಲಿ ಮಾರಕಾಸ್ತ್ರಗಳೊಂದಿಗೆ ಬಂದು ಕೃತ್ಯ ಎಸಗುತ್ತಿದ್ದರು. ಇದನ್ನು ತಡೆಯಲು ಕಡತೋಕಾ, ಜಡ್ಡಿಗದ್ದೆ, ಮಾಡಗೇರಿ, ಊರಕೇರಿ, ಕೆಕ್ಕಾರ, ಗುಡ್ಡಿನಕಟ್ಟು,ಬಾದಳ್ಳಿ,ಚಿಪ್ಪಿಹಕ್ಲು, ನವಿಲಗೋಣ, ಹಳದೀಪುರ ಸೇರಿದಂತೆ ಹತ್ತಾರು ಹಳ್ಳಿಗಳ ಸುಮಾರು 380ಕ್ಕೂ ಹೆಚ್ಚು ಯುವಕರು ಒಂದಾಗಿ ರಾತ್ರಿ ಕಾರ್ಯಾಚರಣೆಗೆ ಇಳಿದಿದ್ದರು.

ರಾತ್ರಿಯಿಡೀ ಕಾವಲು:

ರಾತ್ರಿ 11 ಗಂಟೆಯಿಂದಲೇ ಅರೇಅಂಗಡಿ, ಕಣಿವೆ ಕ್ರಾಸ್, ಜಡ್ಡಿಗದ್ದೆ, ಚಂದಾವರ ಭಾಗಗಳಲ್ಲಿ ಯುವಕರ ತಂಡಗಳು ಅವಿತು ಕುಳಿತಿದ್ದವು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಗೋವುಗಳನ್ನು ತುಂಬಿಕೊಂಡು ಬಂದ ಕಾರನ್ನು ಅಡ್ಡಗಟ್ಟುವಲ್ಲಿ ಯುವಕರು ಯಶಸ್ವಿಯಾಗಿದ್ದಾರೆ.

ಆದರೆ ಕತ್ತಲಾದ್ದರಿಂದ ಕಾರಿನಲ್ಲಿದ್ದ ಚಾಲಕ ಹಾಗೂ ಇನ್ನೋರ್ವ ಸ್ಥಳದಿಂದ ಪರಾರಿಯಾಗಿದ್ದಾರೆ. ವಶಪಡಿಸಿಕೊಂಡ ಕಾರನ್ನು ಪರಿಶೀಲಿಸಿದಾಗ, ಅದರಲ್ಲಿ 6 ರಿಂದ 7 ವಿವಿಧ ನಕಲಿ ನಂಬರ್ ಪ್ಲೇಟ್‌ಗಳು ಪತ್ತೆಯಾಗಿವೆ. ಅಲ್ಲದೆ ಆರೋಪಿಗಳು ಮೊಬೈಲ್ ಫೋನ್ ಅನ್ನು ಕಾರಿನಲ್ಲೇ ಬಿಟ್ಟು ಪರಾರಿಯಾಗಿದ್ದು, ಇದು ದೊಡ್ಡ ಜಾಲವಾಗಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಹೊನ್ನಾವರ ಸಿಪಿಐ ಸಿದ್ದರಾಮೇಶ್ವರ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 24 ಗಂಟೆಯೊಳಗೆ ಆರೋಪಿಗಳನ್ನು ಬಂಧಿಸುವಂತೆ ಗೋ ಪ್ರೇಮಿಗಳು ಆಗ್ರಹಿಸಿದ್ದಾರೆ.

ಯುವಕರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ 

ಪ್ರಾಣದ ಹಂಗು ತೊರೆದು, ಮಾರಕಾಸ್ತ್ರ ಹಿಡಿದು ಬರುವ ಕಳ್ಳರನ್ನು ಎದುರಿಸಿ ಗೋ ರಕ್ಷಣೆ ಮಾಡಿದ ಯುವಕರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.