ನಂಜನಗೂಡು: ಪೆಟ್ರೋಲ್, ಡಿಸೇಲ್‌ ಹಾಗೂ ಸಿಲಿಂಡರ್‌ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ, ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ಯುವ ಕಾಂಗ್ರೆಸ್‌ನಿಂದ ಪ್ರತಿಭಟನೆ ನಡೆಸಲಾಯಿತು.

ಯುವ ಕಾಂಗ್ರೆಸ್‌ ನಂಜನಗೂಡು ತಾಲ್ಲೂಕು ಘಟಕದ ಅಧ್ಯಕ್ಷ ಕರಳಪುರ ವಿಜಯಕುಮಾರ್‌ ನೇತೃತ್ವದಲ್ಲಿ ಹುಲ್ಲಹಳ್ಳಿ ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು, ಕೇಂದ್ರ ಸರ್ಕಾರದ ವಿರುದ್ಧ ವಿವಿಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಕ್ಕೆ ಬರುವ ಮುನ್ನ ಅಚ್ಛೇ ದಿನ್‌ ಅಂತ ಪ್ರಧಾನಿ ಹೇಳಿದ್ರು. ಆದರೆ ಈವರೆಗೂ ಅಚ್ಛೇ ದಿನ್‌ ಬಂದಿಲ್ಲ.

ದಿನೇ ದಿನೇ ಪೆಟ್ರೋಲ್‌, ಡೀಸೆಲ್‌ ಮತ್ತು ಸಿಲಿಂಡರ್‌ ಬೆಲೆ ಹೆಚ್ಚಳವಾಗ್ತಿದೆ. ಬಡ ಮತ್ತು ಮಧ್ಯಮ ವರ್ಗದ ಜನರ ಪಾಲಿಗೆ ಬಿಜೆಪಿ ಬರೆ ಎಳೆಯುತ್ತಿದೆ. ಬಿಜೆಪಿಯ ಈ ಜನವಿರೋಧಿ ನೀತಿ ಖಂಡನೀಯ. ಖಾಲಿ ಸಿಲಿಂಡರ್‌ ಹಿಡಿದು, ಕೈಗಳಲ್ಲಿ ವಿವಿಧ ಘೋಷಣಾ ಫಲಕ ಹಿಡಿದು, ಧಿಕ್ಕಾರದ ಘೋಷಣೆಗಳನ್ನು ಕೂಗಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.

ಈ ವೇಳೆ ಯುವ ಕಾಂಗ್ರೆಸ್‌ ನಂಜನಗೂಡು ತಾಲ್ಲೂಕು ಘಟಕದ ಅಧ್ಯಕ್ಷ ಕರಳಪುರ ವಿಜಯಕುಮಾರ್‌ ಮಾತನಾಡಿ, ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಬರೆ ಎಳೆಯುತ್ತಾ ಬಂದಿದೆ. ಪೆಟ್ರೋಲ್‌, ಡಿಸೇಲ್‌ ಮತ್ತು ಸಿಲಿಂಡರ್‌ ಬೆಲೆ ಏರಿಕೆ ಮಾಡಿ, ಬಡ ಜನರ ಹೊಟ್ಟೆ ಮೇಲೆ ತಣ್ಣೀರು ಬಟ್ಟೆ ಹಾಕಿದೆ.

ಬಡವರ ವಿರೋಧಿ ನೀತಿಗಳ ಮೂಲಕ ಜನರನ್ನು ದಿಕ್ಕು ತಪ್ಪಿಸುತ್ತಿದೆ. ಬಿಜೆಪಿಯ ದುರಾಡಳಿತ ತಿಳಿಸಲು, ಇವತ್ತು ಈ ಪ್ರತಿಭಟನೆ ಹಮ್ಮಿಕೊಂಡಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹಾಕದೇ ಹೋದರೇ ಬಿಜೆಪಿ ವಿರುದ್ಧ ಇನ್ನಷ್ಟು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಪ್ರತಿಭಟನೆಯಲ್ಲಿ ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ ,ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸಿಎಂ ಶಂಕರ್, ಮಹೇಶ್, ಆದರ್ಶ, ತಾಲೂಕು ಎಸ್ .ಸಿ ಮೋರ್ಚಾ ಅಧ್ಯಕ್ಷ ಉಪ್ಪಿನಳ್ಳಿ ಶಿವಣ್ಣ, ಮುಖಂಡರು ಗಳಾದ ಕಳಲೆ ರಾಜೇಶ್, ಮಹೇಂದ್ರ, ಲೋಕೇಶ್, ಸುಧಾಕರ  ,ರವಿ, ಮಂಜು ಸೇರಿದಂತೆ ಹಲವಾರು ಹಲವಾರು ನಗರಸಭಾ ಸದಸ್ಯರುಗಳು ಹಾಗೂ ಕಾರ್ಯಕರ್ತ ಮುಖಂಡರು ಉಪಸ್ಥಿತರಿದ್ದರು.