ಮೈಸೂರು: ಕಂಪನಿಯಲ್ಲಿ ಕೆಲಸದಿಂದ ತೆಗೆದು ಕಿರುಕುಳ ನೀಡಿದ್ದಾರೆ ಎಂದು ಮನನೊಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಿ.ನರಸೀಪುರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇರಂಬಾಡಿ ಗ್ರಾಮದ ಕಿರಣ್ (28) ಮೃತ ಯುವಕ. ತಿ.ನರಸೀಪುರದ ಸಾಯಿ ಗಾರ್ಮೆಂಟ್ಸ್‌ನಲ್ಲಿ ಯುವಕ ಕಿರಣ್‌ ಕೆಲಸ ಮಾಡುತ್ತಿದ್ದನು ಆದರೆ, ಕಂಪನಿಯಲ್ಲಿ ಕೆಲಸದಿಂದ ಬೇಕಂತಲೇ ತೆಗೆದಿದ್ದಾರೆ. ನನ್ನ ಸಾವಿಗೆ ಕಂಪನಿಯ ಕ್ವಾಲಿಟಿ ಎ.ಜಿ.ಎಂ ಲೋಕೇಶ್‌ ಹಾಗೂ ಎಚ್.ಆರ್. ಎ.ಜಿ.ಎಂ ಅನಿಲ್ ಕಾರಣ ಎಂದು ಡೆತ್‌ ನೋಟ್‌ನಲ್ಲಿ ಯುವಕ ಉಲ್ಲೇಖಿಸಿದ್ದಾನೆ.

ನನ್ನನ್ನು ಕೆಲಸದಿಂದ ಬೇಕಂತಲೇ ತೆಗೆದಿದ್ದಾರೆ. ನನ್ನ ಬಗ್ಗೆ ಬೇರೆ ಕಡೆ ಕೆಟ್ಟ ಫೀಡ್ ಬ್ಯಾಕ್ ಕೊಟ್ಟು ಎಲ್ಲೂ ಕೆಲಸಕ್ಕೆ ತೆಗೆದುಕೊಳ್ಳದ ಹಾಗೆ ಮಾಡಿದ್ದಾರೆ. ಲೋಕೇಶ್‌ ಮತ್ತು ಅನಿಲ್‌ ಅವರಿಂದ ಕೆಲಸ ಸಿಗದ ನಾನು ಅತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್‌ನಲ್ಲಿ ಮೃತ ಕಿರಣ್ ಉಲ್ಲೇಖ ಮಾಡಿದ್ದಾನೆ. ಪ್ರಕರಣ ತಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.