ನಂಜನಗೂಡು: ಅಂಗೈಯಲ್ಲಿ ಪ್ರಪಂಚ ನೋಡುವ ಆಧುನಿಕ ಯುಗದ ಕಾಲಘಟ್ಟದಲ್ಲಿ ದೇಶ ಅಭಿವೃದ್ಧಿಯತ್ತ ಸಾಗಿದರು ದೇಶದಲ್ಲಿ ಬೆಳೆಯುವ ಯುವ ಪೀಳಿಗೆಗೆ ಮೊಬೈಲ್ ಫೋನುಗಳಿಗೆ ಮಾರು ಹೋಗಿ ತಮ್ಮ ಜೀವನವನ್ನೇ ನಾಶಪಡಿಸಿಕೊಳ್ಳುತ್ತಿರುವ ಸಾಕಷ್ಟು ಘಟನೆಗಳನ್ನು ನೋಡಿದ್ದೇವೆ ಕೇಳಿದ್ದೇವೆ..!

ಆದರೆ, ಎಲ್ ಕೆ ಜಿ, ಯು ಕೆ ಜಿ ಮಕ್ಕಳಿಂದ ಹಿಡಿದು ಪದವಿ ವಿದ್ಯಾರ್ಥಿಗಳ ತನಕವು ಮೊಬೈಲ್ ಫೋನ್ ಗಳ ಮಾರಕ ಕುಟುಂಬಗಳಲ್ಲಿ ಆತಂಕ ಸೃಷ್ಟಿ ಮಾಡಿದೆ ಎಂದರೆ ತಪ್ಪಾಗಲಾರದು. ಹೆತ್ತವರು ಮತ್ತು ಹುಟ್ಟಿದ ತಾಯ್ನಾಡಿಗೆ ಗೌರವ ತರಬೇಕು ಎಂದರೆ ಯುವ ಪೀಳಿಗೆಗಳಿಂದ ಮೊಬೈಲ್ ಫೋನ್ ಗಳನ್ನು ದೂರ ಸರಿಸಬೇಕು ಎಂಬ ಹಿತದೃಷ್ಟಿಯಿಂದ ಯವಕರ ತಂಡ ಮೊಬೈಲ್ ಫೋನ್ ಗಳಿಗೆ ಬ್ರೇಕ್ ಹಾಕಿ ವಿದ್ಯಾರ್ಥಿಗಳ ಕೈಗೆ ಪುಸ್ತಕ ನೀಡಿರುವ ಅಪರೂಪದ ಗ್ರಾಮದ ಬಗ್ಗೆ ನಾವು ಮಾಹಿತಿ ತಿಳಿಯಲೇ ಬೇಕಲ್ಲವೇ..! ಇದೇ ನೋಡಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ನಂಜನಗೂಡು ತಾಲ್ಲೂಕಿನ ಚುಂಚನಹಳ್ಳಿ ಗ್ರಾಮದಲ್ಲಿ ವಿಮೋಚನಾ ಯುವಕರ ಸಂಘದಿಂದ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಜಯಂತೋತ್ಸವ ಅಂಗವಾಗಿ ಗ್ರಂಥಾಲಯ ತೆರೆದು ಮಾದರಿಯಾಗಿದ್ದಾರೆ.
ಅಂಬೇಡ್ಕರ್ ಜಯಂತಿ ಎಂದರೆ ಆಡಂಬರ ಮಾಡಿಕೊಂಡು ಡಿಜೆ ಸೌಂಡ್ಸ್ ಜೊತೆ ಬಣ್ಣ ಎರಚಿಕೊಂಡು ಕುಣಿದು ಕುಪ್ಪಳಿಸುತ್ತಾರೆ. ಇದಕ್ಕೆಲ್ಲ ಬ್ರೇಕ್ ಹಾಕಿದ ಯುವಕರು, ಗ್ರಾಮದ ಹಿರಿಯರು, ವಿದ್ಯಾವಂತರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ದೇವನೂರು ಗ್ರಾಮ ಪಂಚಾಯಿತಿಯ ಸಹಕಾರದಿಂದ ನೂತನ ಗ್ರಂಥಾಲಯ ಉದ್ಘಾಟನೆಯಾಗಿದೆ. ಚುಂಚನಹಳ್ಳಿ ಗ್ರಾಮದಲ್ಲಿ ಎಲ್ಲಾ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಹಿತದೃಷ್ಟಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳು ಹಾಗೂ ಐಎಎಸ್, ಕೆ ಎಸ್ ಪರೀಕ್ಷೆಗಳಲ್ಲಿ ಭಾಗವಹಿಸಲು ಇಚ್ಛಿಸಿರುವ ವಿದ್ಯಾರ್ಥಿಗಳಿಗೆ ಹೆಚ್ಚು ಹೆಚ್ಚು ಅನುಕೂಲಕರವಾಗಲಿ ಎಂಬ ದೆಸೆಯಿಂದ ಈ ಒಂದು ನೂತನ ಗ್ರಂಥಾಲಯವನ್ನು ಉದ್ಘಾಟನೆ ಮಾಡಲಾಗಿದೆ ಎನ್ನುತ್ತಾರೆ ಚುಂಚನಹಳ್ಳಿ ಗ್ರಾಮಸ್ಥರು. ಏನೇ ಇರಲಿ ಬೆಳೆಯುವ ಕುಡಿಗಳಿಗೆ ಮಾದರಿಯಾಗಿ ಕೈಯಲ್ಲಿ ಪುಸ್ತಕ ಹಿಡಿದು ಆಕಾಶದೆತ್ತರಕ್ಕೆ ಪ್ರತಿಭೆ ತೋರಿಸಿ ಗ್ರಾಮಕ್ಕೆ ಕೀರ್ತಿ ತರಲಿ ಎಂಬ ಮಹಾದಾಸೆ ಚುಂಚನಹಳ್ಳಿ ಗ್ರಾಮಸ್ಥರ ಬೆಟ್ಟದಷ್ಟು ಕನಸುಗಳ ಈಡೇರಿಕೆಗೆ ಮುಂದಾಗಿರುವುದು ಇತರೆ ಗ್ರಾಮಗಳಿಗೆ ಮಾದರಿಯಾಗಿದೆ.

