ನಂಜನಗೂಡು: ಬೈಕ್ ಸಮೇತ ಯುವಕ ಸಜೀವ ದಹನವಾದ ಪ್ರಕರಣ ನಂಜನಗೂಡು ಪೊಲೀಸರ ನಿದ್ದೆ ಕೆಡಿಸಿದೆ. ಪ್ರಕರಣದ ಬಗ್ಗೆ ಸಾಕಷ್ಟು ಅನುಮಾನಗಳು ಉದ್ಭವಿಸಿದ್ದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕನ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.

ನಿನ್ನೆ ಸಂಜೆ ವೇಳೆ ನಂಜನಗೂಡಿನಿಂದ ಕೊರಹುಂಡಿಗೆ ತೆರಳುವ ಮಾರ್ಗದ ಹುಲ್ಲಹಳ್ಳಿ ನಾಲೆ ಪಕ್ಕದಲ್ಲಿ ಬೈಕ್ ನಿಂದ ಯುವಕ ಬೆಂಕಿ ಜ್ವಾಲೆಗಳ ಮಧ್ಯೆ ಓಡಿ ಬಂದು ಬಿದ್ದಿದ್ದಾನೆ. ಕೆಲವೇ ಕ್ಷಣಗಳಲ್ಲಿ ಯುವಕನ ದೇಹ ಸುಟ್ಟುಹೋಗಿದೆ. ಬೈಕ್ ಸಹ ಸುಟ್ಟು ಕರುಕಲಾಗಿದೆ. ಇದನ್ನ ಗಮನಿಸಿದ ಸ್ಥಳೀಯರು ನೆರವಿಗೆ ಧಾವಿಸಿದರಾದ್ರೂ ಯುವಕನ ಪ್ರಾಣ ಉಳಿಸಲು ಸಾಧ್ಯವಾಗಿಲ್ಲವೆಂದು ಹೇಳಲಾಗಿದೆ.

ರಾಂಪುರ ನಿವಾಸಿ ಆದಿತ್ಯ(24). ಮೃತಪಟ್ಟ ಯುವಕ. ಈತನ ಸಾವು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಬೈಕ್ ಗೆ ಬೆಂಕಿ ಹತ್ತಿಕೊಂಡರೆ ಓಡಿ ತಪ್ಪಿಸಿಕೊಳ್ಳಬಹುದಿತ್ತು. ಆದ್ರೆ ಬೈಕ್ ಸಮೇತ ಯುವಕ ಸಹ ಸುಟ್ಟು ಹೋಗಿರುವುದು ಸಹಜವಲ್ಲ ಎಂಬುದು ಕುಟುಂಬಸ್ಥರು ಆರೋಪ. ನಿರ್ಜನ ಪ್ರದೇಶಕ್ಕೆ ಏಕಾಂಗಿಯಾಗಿ ಹೋಗುವ ಬಗ್ಗೆ ಅನುಮಾನವಿದೆ. ಯಾರೋ ಉದ್ದೇಶ ಪೂರ್ವಕವಾಗಿ ಕೊಲೆ ಮಾಡಿರಬಹುದೆಂದು ಶಂಕಿಸಿದ್ದಾರೆ.

ಘಟನೆಯನ್ನ ಗಂಭೀರವಾಗಿ ಪರಿಗಣಿಸಿರುವ ನಂಜನಗೂಡು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ಆದಿತ್ಯ ಸಾವು ಕೊಲೆ ಇರಬಹುದೆಂದೇ ಶಂಕಿಸಲಾಗಿದೆ. ಕೂಡಲೇ ಕುಟುಂಬಸ್ಥರ ಮನವಿಗೆ ಪೊಲೀಸರು ಸ್ಪಂದಿಸಬೇಕಿದೆ.