ನಂಜನಗೂಡು: ದ್ವಿದಳ ಧಾನ್ಯ ಬೆಳೆಗಳಿಗೆ ಹಳದಿ ಬಣ್ಣದ ರೋಗ ಬಂದಿದ್ದು, ರೈತರು ಆತಂಕದಲ್ಲಿದ್ದಾರೆ. ರೋಗದ ಹತೋಟಿಗೆ ಕೃಷಿ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ನಂಜನಗೂಡು ತಾಲ್ಲೂಕಿನ ಬಿಳಿಗೆರೆ ರೈತ ಸಂಪರ್ಕ ಕೇಂದ್ರದ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ರೈತರು ಬೆಳೆದಿರುವ ವಿಧಳ ಧಾನ್ಯಗಳಿಗೆ ಹಳದಿ ಬಣ್ಣದ ರೋಗ ಕಾಣಿಸಿಕೊಂಡಿದ್ದು, ವಿಧಳ ಧಾನ್ಯಗಳಾದ ಹೆಸರು, ಉದ್ದು, ಅಲಸಂದೆ ಸೇರಿದಂತೆ ದ್ವಿದಳ ಧಾನ್ಯಗಳ ಬೆಳೆಯಲಿ ಹಳದಿ ರೋಗ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಬಿಳಿಗೆರೆ ರೈತ ಸಂಪರ್ಕ ಕೇಂದ್ರದ ತಾಂತ್ರಿಕ ವ್ಯವಸ್ಥಾಪಕಿ ಆರ್.ಟಿ ಶೃತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ನಮ್ಮ ರೈತರು ದ್ವಿದಳ ಧಾನ್ಯಗಳನ್ನು ಬಿತ್ತುವ ಸಂದರ್ಭದಲ್ಲಿ ಜಮೀನಿನ ಬದುಗಳಲ್ಲಿ ಮುಸುಕಿನ ಜೋಳ ಅಥವಾ ಮೆಕ್ಕೆ ಜೋಳ ಬಿತ್ತನೆ ಮಾಡಬೇಕು. 25 ರಿಂದ 30 ದಿನ ನಂತರ ಬೆಳೆಗಳು ಬೆಳೆಯುತ್ತವೆ. ಇದರಿಂದ ರಸ ಹೀರುವ ಕೀಟಗಳು ಬಾರದಂತೆ ತಡೆಯಲು ಅನುಕೂಲವಾಗುತ್ತದೆ. ಅದೇ ರೀತಿ ಹಳದಿ ನಂಜು ರೋಗ ಕಂಡು ಬಂದ ತಕ್ಷಣ ಅಂತಹ ಗಿಡವನ್ನು ಕಿತ್ತು ಒಂದು ಕಡೆ ಹಾಕಿ ಸುಡಬೇಕು.
ಅವಶ್ಯಕತೆ ಅನುಗುಣವಾಗಿ ಕೀಟ ನಾಟಕಗಳನ್ನು ಬಳಕೆ ಮಾಡಬೇಕು. ಬೇವಿನ ಎಣ್ಣೆಯನ್ನು ಬಳಸುವುದರಿಂದ ಕೀಟಬಾಧೆ ಮತ್ತು ಬರುವ ರೋಗವನ್ನು ತಡೆಯಬಹುದು. ರೈತರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಬೇಕು ಕೀಟಬಾಧೆ ಕಂಡು ಬಂದಲ್ಲಿ ರೈತರು ಹತೋಟಿಗೆ ತರಬೇಕು ಎಂದು ತಿಳಿಸಿದರು.

