ನಂಜನಗೂಡು: ಜುಲೈ 1 ಮತ್ತು 2 ರಂದು ಎರಡು ದಿನಗಳ ಕಾಲ ಶ್ರೀ ಕ್ಷೇತ್ರ ದೇವನೂರು ಶ್ರೀ ಗುರುಮಲ್ಲೇಶ್ವರ ಮಹಾಸಂಸ್ಥಾನ ದಾಸೋಹ ಮಠದಲ್ಲಿ ಶ್ರೀ ಗುರು ಮಲ್ಲೇಶ್ವರರ 127ನೇ ಪುಣ್ಯ ಆರಾಧನೆ ಹಮ್ಮಿಕೊಳ್ಳಲಾಗಿದೆ ಎಂದು ಶ್ರೀ ಗುರು ಮಲ್ಲೇಶ್ವರ ಆರಾಧನೆ ಸಮಿತಿಯ ಅಧ್ಯಕ್ಷ ಪ್ರೊ.ಡಿ. ಎಸ್ ಸದಾಶಿವಮೂರ್ತಿ ಹೇಳಿದರು.
ನಂಜನಗೂಡು ನಗರದ ಶ್ರೀ ಗುರು ಮಲ್ಲೇಶ್ವರ ಪ್ರೌಢ ಶಾಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮದಲ್ಲಿರುವ ಶ್ರೀ ಗುರು ಮಲ್ಲೇಶ್ವರ ಮಹಾ ಸಂಸ್ಥಾನ ದಾಸೋಹ ಮಠಾಧ್ಯಕ್ಷರಾದ ಶ್ರೀ ಮಹಾಂತ ಸ್ವಾಮೀಜಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಜುಲೈ 1 ರಂದು ಬೆಳಿಗ್ಗೆ 7:30ಕ್ಕೆ ಮೈಸೂರಿನ ಹೊಸಮಠದ ಶ್ರೀ ಚಿದಾನಂದ ಸ್ವಾಮಿಗಳ ದಿವ್ಯ ಸಮ್ಮುಖದಲ್ಲಿ ಮತ್ತು ಸುಕ್ಷೇತ್ರ ಮಲ್ಲನ ಮೂಲೆಯ ಶ್ರೀ ಇಮ್ಮಡಿ ಸಿದ್ದಲಿಂಗ ಸ್ವಾಮಿಗಳು ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬೆಳಿಗ್ಗೆ 10:30ಕ್ಕೆ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿಗಳು ಬಸವ ಮಹಾದ್ವಾರ ಉದ್ಘಾಟನೆ ಮಾಡಲಿದ್ದಾರೆ. ಸಿದ್ದಗಂಗಾ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳು ಕಲ್ಯಾಣಿ ಉದ್ಘಾಟಿಸಲಿದ್ದಾರೆ. ಧಾರ್ಮಿಕ ಸಭೆಯ ದಿವ್ಯ ಸಾನಿಧ್ಯವನ್ನು ಸೋಮಹಳ್ಳಿ ಮಠದ ಶ್ರೀ ಸಿದ್ದ ಮಲ್ಲಸ್ವಾಮಿಗಳು ಹಾಗೂ ವಾಟಾಳು ಮಠದ ಶ್ರೀ ಸಿದ್ದಲಿಂಗ ಶಿವಚಾರ್ಯ ಸ್ವಾಮೀಜಿಗಳು ವಹಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಧಾರ್ಮಿಕ ಸಭೆಯನ್ನು ಉದ್ಘಾಟಿಸಲಿದ್ದಾರೆ.
ಮಾಜಿ ಸಚಿವ ಹಾಗೂ ಶಾಸಕ ಡಾ.ಹೆಚ್.ಸಿ ಮಹದೇವಪ್ಪ ರವರು ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಸಂಸದ ಸುನಿಲ್ ಬೋಸ್, ಶಾಸಕರಾದ ದರ್ಶನ್ ಧ್ರುವನಾರಾಯಣ್, ಪುಟ್ಟರಂಗಶೆಟ್ಟಿ, ಎ.ಆರ್ ಕೃಷ್ಣಮೂರ್ತಿ, ಕಾಡ ಅಧ್ಯಕ್ಷ ಪಿ.ಮರಿಸ್ವಾಮಿ, ಮಾಜಿ ಶಾಸಕ ಕಳಲೆ ಕೇಶವಮೂರ್ತಿ ರವರು ಆಗಮಿಸಲಿದ್ದಾರೆ.
ಮಧ್ಯಾಹ್ನ ವಿಚಾರಗೋಷ್ಠಿ ನಡೆಯಲಿದ್ದು, ಶ್ರೀಮಠದ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಕುರಿತು ವಿಷಯ ಮಂಡಿಸಲಿದ್ದಾರೆ. ಅಪರ ಜಿಲ್ಲಾಧಿಕಾರಿ ಡಾ.ಪಿ ಶಿವರಾಜ್, ತಹಶೀಲ್ದಾರ್ ಡಾ.ಸ್ಮಿತಾ ರಾಮು, ಡಿವೈಎಸ್ಪಿ ಧರ್ಮೇಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಮುಖ್ಯ ಅತಿಥಿಗಳಿಗಾಗಿ ಭಾಗವಹಿಸಲಿದ್ದಾರೆ. ಸಂಜೆ 6:30ಕ್ಕೆ ವಿವಿಧ ತಂಡಗಳಿಂದ ನೃತ್ಯರೂಪಕ, ವಚನ ನೃತ್ಯ, ಜಂಗಮೋತ್ಸವ ಹಾಗೂ ರಾತ್ರಿ 10 ಗಂಟೆಗೆ ಮೈಸೂರು ತಾಲ್ಲೂಕಿನ ಶ್ರೀ ಮಡಿವಾಳೇಶ್ವರ ಕಲಾ ಸಂಘದವರಿಂದ ಕುರುಕ್ಷೇತ್ರ ನಾಟಕ ನಡೆಯಲಿದೆ.
ಜು.2 ರಂದು ಗುರುವಾರ ಬೆಳಿಗ್ಗೆ 8 ಗಂಟೆಗೆ ಶ್ರೀ ಗುರು ಮಲ್ಲೇಶ್ವರರ ರಥೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಬೆಳಿಗ್ಗೆ 9 ಗಂಟೆಗೆ ಬದನವಾಳು ಶಿವಕುಮಾರ್ ಶಾಸ್ತ್ರಿ ರವರ ನಾದಸಂಗಮ ಕಲಾ ವೃಂದದಿಂದ ಭಕ್ತಿಗೀತೆಗಳ ಗಾಯನ, ಸಾಲೂರು ಮಠದ ಡಾ. ಶಾಂತ ಮಲ್ಲಿಕಾರ್ಜುನ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಹಾಗೂ ಶಾಸಕ ಬಿ.ವೈ ವಿಜಯೇಂದ್ರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಲಿದ್ದಾರೆ. ಮೈಸೂರು, ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ವಿಧಾನಪರಿಷತ್ ಸದಸ್ಯರಾದ ವಿವೇಕಾನಂದ, ಮಾಜಿ ಶಾಸಕರಾದ ಪರಿಮಳ ನಾಗಪ್ಪ, ಸಿ.ಎಸ್ ನಿರಂಜನ್ ಕುಮಾರ್, ಬಿ.ಹರ್ಷವರ್ಧನ್ ಹಾಗೂ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಮಹದೇವಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಶ್ರೀ ಗುರು ಮಲ್ಲೇಶ್ವರರ ವಿದ್ಯಾಸಂಸ್ಥೆಯ ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ.
ಅಂದು ರಾತ್ರಿ 8:30 ಕ್ಕೆ ನೂತನವಾಗಿ ನಿರ್ಮಿಸಿರುವ ಕಲ್ಯಾಣಿಯಲ್ಲಿ ಶ್ರೀ ಗುರು ಮಲ್ಲೇಶ್ವರರ ತೆಪ್ಪೋತ್ಸವ ವಿಜೃಂಭಣೆಯಿಂದ ಜರುಗಲಿದೆ. ಮದ್ದು, ಬಾಣ, ಬಿರುಸುಗಳ ಪ್ರದರ್ಶನ ಇರುತ್ತದೆ. ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಸುಮಾರು 200ಕ್ಕೂ ಹೆಚ್ಚು ಮಠಾಧೀಶರು ಆಗಮಿಸಲಿದ್ದು, ಸುಮಾರು ಒಂದುವರೆ ಲಕ್ಷ ಜನರು ಬರುವ ನಿರೀಕ್ಷೆ ಇದೆ. ಆಗಮಿಸುವ ಎಲ್ಲ ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಎರಡು ದಿನಗಳ ಕಾಲ ನಡೆಯುವ ಮಹೋತ್ಸವಕ್ಕೆ ಭಕ್ತರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಶೌಚಾಲಯ, ಕುಡಿಯುವ ನೀರು ಮತ್ತು 3 ಸಾವಿರ ಜನ ಕುಳಿತು ಊಟ ಮಾಡಲು ವ್ಯವಸ್ಥೆ ಮಾಡಲಾಗಿದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀ ಗುರುಮಲ್ಲೇಶ್ವರ ಆರಾಧನಾ ಸಮಿತಿಯ ಉಪಾಧ್ಯಕ್ಷ ರಾಜೇಶ್, ಕಾರ್ಯದರ್ಶಿ ವೃಷಬೇಂದ್ರ, ನಿಕಟಪೂರ್ವ ಕಾರ್ಯದರ್ಶಿ ಡಿ.ಜೆ ಗುರು, ಮಹದೇವಸ್ವಾಮಿ, ರವಿಮೂರ್ತಿ ಹಾಜರಿದ್ದರು.

