ಮೈಸೂರು; ವಿಶ್ವದ ಮೊದಲ 15 ಡಿಗ್ರಿ ಓರೆಯಾದ ಎಲ್‌ಇಡಿ ಡೋಮ್ ತಾರಾಲಯ ಮೈಸೂರಿನಲ್ಲಿ ನಿರ್ಮಾಣಗೊಂಡಿದ್ದು, ನವೆಂಬರ್ 13ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.

ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಶ್ರೀ ಜಯಚಾಮರಾಜ ಒಡೆಯರ್ ಉನ್ನತ ಕಲಿಕಾ ಕೇಂದ್ರದ ಆವರಣದಲ್ಲಿ ಈ ಅತ್ಯಾಧುನಿಕ ತಾರಾಲಯ ನಿರ್ಮಿಸಲಾಗಿದೆ. ಇದಕ್ಕಾಗಿ ಮೈಸೂರು ವಿಶ್ವವಿದ್ಯಾನಿಲಯ ಮೂರು ಎಕರೆ ಭೂಮಿ ನೀಡಿದ್ದು, ಸುಮಾರು 91 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆ ಸಾಕಾರಗೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಸೇರಿದಂತೆ ಕೇಂದ್ರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನಗೊಂಡಿದೆ.

ತಾರಾಲಯದ ವಿಶೇಷವೆಂದರೆ 15 ಮೀಟರ್ ವ್ಯಾಪ್ತಿಯ ಗುಮ್ಮಟವನ್ನು ಸಂಪೂರ್ಣ ಎಲ್‌ಇಡಿ ಪ್ಯಾನೆಲ್‌ಗಳಿಂದ ನಿರ್ಮಿಸಲಾಗಿದೆ. ಸಾಮಾನ್ಯ ಪ್ರೊಜೆಕ್ಟರ್ ತಂತ್ರಜ್ಞಾನದ ಬದಲಾಗಿ ಎಲ್‌ಇಡಿ ಪರದೆಯ ಮೇಲೆಯೇ ಆಕಾಶದ ದೃಶ್ಯಾವಳಿಗಳನ್ನು ನೇರವಾಗಿ ಪ್ರದರ್ಶಿಸಲಾಗುತ್ತದೆ. 15 ಡಿಗ್ರಿ ಓರೆಯಾದ ವಿನ್ಯಾಸ ಹಾಗೂ 8ಕೆ ರೆಸಲ್ಯೂಶನ್ ತಂತ್ರಜ್ಞಾನದಿಂದ ಗ್ರಹ, ನಕ್ಷತ್ರಗಳ ವೀಕ್ಷಣೆ ಹೊಸ ಅನುಭವ ನೀಡಲಿದೆ.

ಫ್ರಾನ್ಸ್‌ನ ಆರ್‌ಎಸ್‌ಎ ಕಾಸ್ಮೋಸ್ ಮತ್ತು ಜಪಾನ್‌ನ ಕೊನಿಕಾ ಮಿನೋಲ್ಟಾ ಸಂಸ್ಥೆಗಳ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಸ್ಕೈ ಎಕ್ಸ್‌ಪ್ಲೋರರ್ ತಂತ್ರಾಂಶವನ್ನು ಇಲ್ಲಿ ಬಳಸಲಾಗಿದೆ. ಏಕಕಾಲದಲ್ಲಿ 150 ಮಂದಿ ಕುಳಿತು ವೀಕ್ಷಣೆ ಮಾಡುವ ಸಾಮರ್ಥ್ಯ ಹೊಂದಿದೆ.

ಇದರೊಂದಿಗೆ ವಿದ್ಯಾರ್ಥಿಗಳು ಹಾಗೂ ಯುವ ವಿಜ್ಞಾನಿಗಳಿಗೆ ಖಗೋಳ ವಿಜ್ಞಾನದಲ್ಲಿ ತರಬೇತಿ ನೀಡುವ ಉದ್ದೇಶವೂ ಇದೆ. ಬೆಂಗಳೂರಿನ ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ ಮತ್ತು ಮೈಸೂರು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಕಾಸ್ಮೋಸ್ ಕಾಸ್ಮಾಲಜಿ ತರಬೇತಿ ಕೇಂದ್ರ ಕಾರ್ಯನಿರ್ವಹಿಸಲಿದೆ. ಭಾರತದ ಅತ್ಯಾಧುನಿಕ ದೂರದರ್ಶಕಗಳಿಂದ ಸಂಗ್ರಹವಾಗುವ ದತ್ತಾಂಶಗಳ ವಿಶ್ಲೇಷಣೆ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ.