ನಂಜನಗೂಡು: ಡೆತ್ ನೋಟ್ ಬರೆದಿಟ್ಟು ಕಾರ್ಮಿಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡಿನ ಕಲ್ಲಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ನೆಸ್ಲೆ ಕಾರ್ಖಾನೆಯಲ್ಲಿ ನಡೆದಿದೆ.
ನಂಜನಗೂಡು ತಾಲ್ಲೂಕಿನ ಕಪಸೋಗೆ ಗ್ರಾಮದ ಕುಮಾರಸ್ವಾಮಿ(45) ಮೃತ ದುರ್ದೈವಿ. ಕಳೆದ 23 ವರ್ಷಗಳಿಂದ ನೆಸ್ಲೆ ಕಾರ್ಖಾನೆಯಲ್ಲಿ ಕಾರ್ಮಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಾರ್ಖಾನೆಯಲ್ಲಿ ಸಹೋದ್ಯೋಗಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಉಲ್ಲೇಖ ಮಾಡಿದ್ದಾರೆ.
ವಿದ್ಯಾಶ್ರೀ, ರಾಘವೇಂದ್ರ ಮತ್ತು ದಿನೇಶ್ ಎಂಬ ಮೂವರ ಹೆಸರು ಉಲ್ಲೇಖಿಸಿ ನನ್ನ ಸಾವಿಗೆ ಈ ಮೂವರೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿಷಯ ತಿಳಿದು ಸ್ಥಳಕ್ಕೆ ನಂಜನಗೂಡು ಪಟ್ಟಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

