ನಂಜನಗೂಡು: ಜಮೀನಿಗೆ ತೆರಳಿದ ವೃದ್ಧೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ ನಂಜನಗೂಡು ತಾಲ್ಲೂಕು ಕಸುವಿನಹಳ್ಳಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ನಾಪತ್ತೆಯಾದ ಸ್ಥಳದಲ್ಲಿ ಮನುಷ್ಯರು ಸೃಷ್ಟಿಸಿದ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ವೃದ್ಧೆ ಅಪಹರಣವೋ ಅಥವಾ ಕಾಡುಪ್ರಾಣಿಗಳು ಎಳೆದೊಯ್ದಿರಬಹುದೇ ಎಂಬ ಆತಂಕ ಶುರುವಾಗಿದೆ. ಕುಟುಂಬಸ್ಥರು ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಶಿವರುದ್ರಮ್ಮ (63) ನಿಗೂಢವಾಗಿ ನಾಪತ್ತೆಯಾದ ವೃದ್ಧೆ.

ನಿನ್ನೆ ಜಮೀನಿಗೆ ಎಂದು ಮನೆ ಬಿಟ್ಟ ಶಿವರುದ್ರಮ್ಮ ಮತ್ತೆ ಹಿಂದಿರುಗಿಲ್ಲ. ತಡರಾತ್ರಿ ಆದ್ರೂ ಮನೆಗೆ ಹಿಂದಿರುಗದ ಹಿನ್ನಲೆ ಕುಟುಂಬಸ್ಥರು ಆತಂಕಗೊಂಡು ನಂಜನಗೂಡು ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದಾರೆ.ಸ್ಥಳ ಪರಿಶೀಲನೆ ನಡೆಸಿದಾಗ ಶಿವರುದ್ರಮ್ಮ ತೆರಳಿದ್ದ ಜಮೀನು ಬಳಿ ಮನುಷ್ಯರು ಬೆರಳಿನಿಂದ ಸೃಷ್ಟಿಸಿದ ಚಿರತೆ ಹೆಜ್ಜೆಯಂತಹ ಗುರುತು ಪತ್ತೆಯಾಗಿದೆ. ಅಲ್ಲದೆ ಶಿವರುದ್ರಮ್ಮ ರವರ ಚಪ್ಪಲಿಗಳು ಅನಾಥವಾಗಿ ಬಿದ್ದಿವೆ.

ಕಾಡುಪ್ರಾಣಿಗಳು ಎಳೆದೊಯ್ದಿರಬಹುದೆಂಬ ಶಂಕೆಯಿಂದ ಅರಣ್ಯ ಇಲಾಖೆ ಸಹ ಶೋಧನೆ ನಡೆಸಿದ್ದಾರೆ. ಕೃತಕ ಚಿರತೆ ಹೆಜ್ಜೆ ಗುರುತು ಹೊರತುಪಡಿಸಿದರೆ ಎಳೆದೊಯ್ದಿರುವ ಇನ್ಯಾವುದೇ ಕುರುಹುಗಳು ಕಂಡು ಬಂದಿಲ್ಲ. ಶಿವರುದ್ರಮ್ಮ 60 ಗ್ರಾಂ ಚಿನ್ನದ ಸರ ಹಾಗೂ 10 ಗ್ರಾಂ ಕಿವಿ ಓಲೆಗಳು ಧರಿಸಿದ್ದರೆಂದು ಹೇಳಲಾಗಿದೆ. ಶಿವರುದ್ರಮ್ಮ ನಾಪತ್ತೆ ಪೊಲೀಸರಿಗೆ ಹಾಗೂ ಅರಣ್ಯ ಇಲಾಖೆಗೆ ತಲೆನೋವು ತಂದಿದೆ.

ಕಿಡಿಗೇಡಿಗಳ ಕೃತ್ಯವೋ ಅಥವಾ ಕಾಡುಪ್ರಾಣಿಗಳು ಎಳೆದೊಯ್ದಿದೆಯೋ ಗೊತ್ತಿಲ್ಲ. ಸದ್ಯ ನಂಜನಗೂಡು ಗ್ರಾಮಾಂತರ ಠಾಣೆ ಪೊಲೀಸರು ಮಿಸ್ಸಿಂಗ್ ಕಂಪ್ಲೇಂಟ್ ದಾಖಲಿಸಿಕೊಂಡು ಶಿವರುದ್ರಮ್ಮ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ.