ನಂಜನಗೂಡು: ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ನಂಜನಗೂಡು ತಾಲ್ಲೂಕಿನ ಕರಳಪುರ ಗ್ರಾಮದಲ್ಲಿ ನಡೆದಿದೆ.
25 ವರ್ಷದ ಮಹದೇವಿ ಮೃತ ದುರ್ದೈವಿ. ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಮಹದೇವಿ ಪೋಷಕರು ಗಂಭೀರವಾಗಿ ಆರೋಪಿಸಿದ್ದಾರೆ. ಮಡುವಿನಹಳ್ಳಿ ಗ್ರಾಮದ ಮಹದೇವಶೆಟ್ಟಿ ಎಂಬುವವರ ಪುತ್ರಿ ಮಹದೇವಿಯನ್ನು ಕರಳಪುರ ಗ್ರಾಮದ ಕಾಂತ ಎಂಬುವವರಿಗೆ 3 ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು.

ಮಗಳ ಸಾವಿಗೆ ಆಕೆಯ ಗಂಡ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಕಾಂತ ಎಂಬಾತನನ್ನ ಮಹಾದೇವಿ ಪ್ರೀತಿಸಿ ವಿವಾಹವಾಗಿದ್ದಳು ಎನ್ನಲಾಗಿದೆ. ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸ್ಥಳಕ್ಕೆ ಪಿಎಸ್‌ಐ ಸುನೀಲ್ ಕುಮಾರ್, ಎಎಸ್‌ಐ ನಾಗರಾಜು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ರವಾನಿಸಿದ್ದಾರೆ. ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

