ನಂಜನಗೂಡು: ಅಮಾವಾಸ್ಯೆ ರಾತ್ರಿ ಗ್ರಾಮದ ಮಧ್ಯದಲ್ಲಿ ನಡೆದ ವಾಮಾಚಾರ ದೃಶ್ಯ ನೋಡಿ ಗೋಳೂರು ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ನಂಜನಗೂಡು ತಾಲ್ಲೂಕಿನ ಗೋಳೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಕಿಡಿಗೇಡಿಗಳು ರಂಗೋಲೆ ಹಾಕಿ, ತಲೆಬುರುಡೆ ಮತ್ತು ಹಸ್ತದ ಮೂಳೆ ಇಟ್ಟು ಮಾಟ-ಮಂತ್ರ ಮಾಡಿರುವ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಗ್ರಾಮದ ಜನರು ಬೆಳಗ್ಗೆ ಕೆಲಸಕ್ಕೆ ಹೋಗುವ ವೇಳೆ ಮುಖ್ಯ ರಸ್ತೆಯ ಮಧ್ಯದಲ್ಲಿ ವಿಚಿತ್ರ ರಂಗೋಲಿ ಕಂಡಿದೆ. ರಂಗೋಲೆಯ ಮಧ್ಯದಲ್ಲಿ ಮಾನವನ ತಲೆಬುರುಡೆ, ಹಸ್ತದ ಮೂಳೆಗಳನ್ನು ಇರಿಸಲಾಗಿತ್ತು. ಸುತ್ತ ಕುಂಕುಮ ಚೆಲ್ಲಿ, ನಿಂಬೆಹಣ್ಣು ಇಡಲಾಗಿತ್ತು. ರಾತ್ರಿ ಅಮಾವಾಸ್ಯೆ ಇದ್ದ ಹಿನ್ನೆಲೆ ಕಿಡಿಗೇಡಿಗಳು ಈ ಕೃತ್ಯ ಎಸಗಿರಬಹುದು ಎಂದು ಗ್ರಾಮಸ್ಥರು ಶಂಕಿಸಿದ್ದಾರೆ.

ಈ ದೃಶ್ಯ ನೋಡಿದ ಮಹಿಳೆಯರು, ಮಕ್ಕಳು ಭಯದಿಂದ ನಡುಗಿದ್ದಾರೆ. “ನಮ್ಮೂರಿನ ಹೃದಯ ಭಾಗದಲ್ಲೇ ಇಂತಹ ಕೆಲಸ ಮಾಡಿದ್ದಾರೆ. ರಾತ್ರಿ ನಿದ್ದೆ ಹಾಳಾಯಿತು” ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಗ್ರಾಮಸ್ಥ ಮುದ್ದುಮಾದಶೆಟ್ಟಿ ಇದು ನಮ್ಮ ಗ್ರಾಮಕ್ಕೆ ಮಾಡಿದ ದೊಡ್ಡ ಅವಮಾನ. ಅಮಾವಾಸ್ಯೆ ದಿನ ನೋಡಿ ಇಂತಹ ವಾಮಾಚಾರ ಮಾಡಿದ್ದಾರೆ. ಯಾರು ಈ ಕೃತ್ಯ ಮಾಡಿದರು ಅಂತ ಗೊತ್ತಿಲ್ಲ. ಪೊಲೀಸರು ಕೂಡಲೇ ತನಿಖೆ ಮಾಡಿ ಕಿಡಿಗೇಡಿಗಳನ್ನು ಹಿಡಿದು ಶಿಕ್ಷಿಸಬೇಕು. ಗ್ರಾಮದಲ್ಲಿ ಶಾಂತಿ ಕಾಪಾಡಬೇಕು ಎಂದು ಆಗ್ರಹಿಸಿದರು.

ವಾಮಾಚಾರ ಮಾಡಿದವರಿಗೆ ಹಿಡಿ ಶಾಪ ಹಾಕಿದ ಗ್ರಾಮಸ್ಥರು, ತಾಲ್ಲೂಕು ಆಡಳಿತ ಮತ್ತು ಪೊಲೀಸರು ತಕ್ಷಣ ಮಧ್ಯಪ್ರವೇಶಿಸಿ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿದ್ದಾರೆ. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯಿಂದ ಗೋಳೂರು ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.