ನಂಜನಗೂಡು: ಹಾಲು ಉತ್ಪಾದಕರ ಸಹಕಾರ ಸಂಘದ ಕಛೇರಿಯಲ್ಲಿ ವಾಮಾಚಾರ ನಡೆದಿದ್ದು, ಬೆಳ್ಳಂಬೆಳಿಗ್ಗೆ ತರಗನಹಳ್ಳಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ನಂಜನಗೂಡು ತಾಲ್ಲೂಕಿನ ತರಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಕಛೇರಿಯಲ್ಲಿ ಮಾಟ ಮಂತ್ರ ನಡೆದಿದೆ. ಸಂಘದ ಕಛೇರಿಯ ದಾಖಲೆಗಳಿರುವ ಬೀರುವಿನಲ್ಲಿ ವಾಮಾಚಾರ ಮಾಡಲಾಗಿದ್ದು, ಗೊಂಬೆ, ಅರಿಶಿಣ ಕುಂಕುಮ ಹಾಗೂ ಮಡಿಕೆ, ಪತ್ರ, ಕಾರ್ಯದರ್ಶಿ ಮಹದೇವಪ್ರಸಾದ್ ಭಾವಚಿತ್ರ, ಸೇರಿದಂತೆ ವಾಮಾಚಾರದ ಸಾಮಗ್ರಿಗಳು ಪತ್ತೆಯಾಗಿದೆ.
ಕಳೆದ ಒಂದು ವರ್ಷಗಳ ಹಿಂದೆ ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಹಿಂದೆ ಇದ್ದ ಕಾರ್ಯದರ್ಶಿ ಮಹೇಶ್ ರವರ ಮೇಲೆ ಹಣ ದುರುಪಯೋಗ ಮತ್ತು ಭ್ರಷ್ಟಾಚಾರ ಆರೋಪ ಮಾಡಲಾಗಿತ್ತು. ಇದರಿಂದ ಸೇವೆಯಿಂದ ಕಾರ್ಯದರ್ಶಿ ಮಹೇಶ್ ನನ್ನು ವಜಾ ಮಾಡಿ, ಆ ಸ್ಥಳಕ್ಕೆ ಮಹದೇವ ಪ್ರಸಾದ್ ಎಂಬ ವ್ಯಕ್ತಿಯನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದಾರೆ.
ಹಾಲಿ ಕಾರ್ಯದರ್ಶಿ ಮಹದೇವ ಪ್ರಸಾದ್ ಕಾರ್ಯನಿರ್ವಹಿಸುತ್ತಿದ್ದು, ಸಹಕಾರ ಸಂಘದಲ್ಲಿ ನಷ್ಟ ಉಂಟಾಗಲಿ, ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿ, ಮರಣ ಹೊಂದಲಿ ಎಂದು ಮಾಜಿ ಕಾರ್ಯದರ್ಶಿ, ಮಾಜಿ ಅಧ್ಯಕ್ಷರು ನಿರಂತರವಾಗಿ ನನ್ನ ಮೇಲೆ ವಾಮಾಚಾರ ಮಾಡಿದ್ದಾರೆ ಎಂದು ಮಹದೇವಪ್ರಸಾದ್ ಗಂಭೀರವಾಗಿ ಆರೋಪಿಸಿದ್ದಾರೆ. ಡೈರಿಯಲ್ಲಿ ವಾಮಾಚಾರ ಮಾಡಿದವರ ವಿರುದ್ಧ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾರ್ಯದರ್ಶಿ ಮಹದೇವಪ್ರಸಾದ್ ಒತ್ತಾಯಿಸಿದ್ದಾರೆ.

