ನಂಜನಗೂಡು: ದೇಶದಲ್ಲಿ ರಾಜಕೀಯ ಸ್ವಾತಂತ್ರ್ಯಕ್ಕಿಂತ ಸಾಮಾಜಿಕ ಸ್ವಾತಂತ್ರ್ಯ ಬೇಕಾಗಿದೆ ಎಂದು ಸಾಹಿತಿ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯಪಟ್ಟರು.
ನಂಜನಗೂಡು ನಗರದ ಶ್ರಾವಣ ಕಲ್ಯಾಣ ಮಂಟಪದಲ್ಲಿ ಬುದ್ಧ, ಬಸವಣ್ಣ, ಅಂಬೇಡ್ಕರ್ ರವರ ಜನ್ಮದಿನದ ಅಂಗವಾಗಿ ಸಂವಿಧಾನದ ಆಶಯಗಳು ಮತ್ತು ಬಹುತ್ವದ ಭಾರತಕ್ಕಿರುವ ಸವಾಲುಗಳು ಎಂಬ ಜನ ಜಾಗೃತಿ ಸಮಾವೇಶವನ್ನು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ರವರು ಬುದ್ಧ, ಬಸವಣ್ಣ, ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಬಳಿಕ ಮುಖ್ಯ ಭಾಷಣಕಾರರಾಗಿ ಆಗಮಿಸಿದ್ದ ಸಾಹಿತಿ ಡಾ. ಬಂಜೆಗೆರೆ ಜಯಪ್ರಕಾಶ್ ಮಾತನಾಡಿ, ಬೌದ್ಧ ಧರ್ಮದ ಪರಿಕಲ್ಪನೆಗಳನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ಯುವಕರು ಮಾಡಬೇಕಾಗಿದೆ. ಬುದ್ಧನ ಪ್ರಜ್ಞಾ, ಕರುಣ, ಮೈತ್ರಿಯನ್ನು ಯುವ ಜನತೆಗೆ ತಿಳಿಸಬೇಕು. ರಾಜಕೀಯ ಸ್ವಾತಂತ್ರ್ಯ ಮಾತ್ರವಲ್ಲದೆ ಪ್ರತಿಯೊಬ್ಬರಿಗೂ ಸಾಮಾಜಿಕ ಸ್ವಾತಂತ್ರ್ಯ ಅಗತ್ಯವಾಗಿದೆ. ನಮಗೆ ಬೇಕಾದ ಶಿಕ್ಷಣ, ಉದ್ಯೋಗ, ಸ್ನೇಹ, ಪ್ರೀತಿಯ ಸ್ವಾತಂತ್ರ್ಯ ಎಲ್ಲರಿಗೂ ಸಮಾನತೆಯ ಸ್ವಾತಂತ್ರ್ಯ ಸಿಗಬೇಕು.
ಸಮಾನತೆ ಹುಟ್ಟಿದರೆ ಭ್ರಾತೃತ್ವ ಬೆಳೆಯುತ್ತದೆ. 11ನೇ ಶತಮಾನದಲ್ಲಿ ಬಸವಣ್ಣನವರ ಕಾಲಘಟ್ಟದಲ್ಲಿ ಲಿಂಗ ತಾರತಮ್ಯಯನ್ನು ಹೋಗಲಾಡಿಸಿ ಸಮಾನತೆಯ ಸಮಾಜ ನಿರ್ಮಾಣವಾಗಿತ್ತು. ಜಾತ್ಯಾತೀತ ಎನ್ನುವುದು ಎಲ್ಲ ಸಮುದಾಯವನ್ನು ಒಳಗೊಳ್ಳುತ್ತದೆ. ಎಲ್ಲರ ಏಳಿಗೆಗೆ ಸಹಕಾರಿಯಾಗುತ್ತದೆ. ಇದರ ವಿರುದ್ಧ ಆರ್ ಎಸ್‌ಎಸ್ ಇದೆ ಎಂದು ಹೇಳಿದ ಅವರು, ಒಂದೇ ಧರ್ಮ ರಾಷ್ಟ್ರ ಧರ್ಮವಾಗುತ್ತದೆ ಎಂದು ಹೇಳುತ್ತಿದ್ದಾರೆ. ಹಿಂದೂ ರಾಷ್ಟ್ರ ಮಾಡುವ ಹುನ್ನಾರ ನಡೆಸಲಾಗುತ್ತಿದೆ.

ಧರ್ಮದ ಪ್ರತಿಪಾದನೆಯಲ್ಲಿ ಮೇಲು, ಕೀಳು, ಆಹಾರ ಸೇವನೆಯಲ್ಲೂ ಹಕ್ಕನ್ನು ಕಿತ್ತುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತವು ಮಾಂಸಾಹಾರಿಗಳ ದೇಶವಾಗಿದೆ. ಸಂವಿಧಾನದ ಆಶಯಗಳನ್ನು ಪಾಲಿಸಬೇಕು. ಭಾರತದಲ್ಲಿ ಏಕ ಭಾಷೆ, ಒಂದೇ ಧರ್ಮವನ್ನು ಏರಲು ಸಾಧ್ಯವಿಲ್ಲ. ಪ್ರತಿ ಗ್ರಾಮಗಳಲ್ಲಿ ಸಂವಿಧಾನದ ಆಶಯಗಳನ್ನು ಗೌರವಿಸಿ ಭಾರತದ ಸಂವಿಧಾನವನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯನ್ನು ಎಲ್ಲರೂ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಬೆಟ್ಟಯ್ಯ ಕೋಟೆ ವಹಿಸಿದ್ದರು. ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಆಲಗೂಡು ಶಿವಕುಮಾರ್, ಜಿಲ್ಲಾ ಸಂಘಟನಾ ಸಂಚಾಲಕರಾದ ಶಂಭುಲಿಂಗಸ್ವಾಮಿ, ಹೆಗ್ಗನೂರು ನಿಂಗರಾಜು, ಖಜಾಂಚಿ ಬಿ.ಡಿ ಶಿವಬುದ್ದಿ, ಉಪವಿಭಾಗೀಯ ಸಂಚಾಲಕ ಮಂಜು ಶಂಕರಪುರ, ಸಂಘಟನಾ ಸಂಚಾಲಕ ಕೃಷ್ಣಮೂರ್ತಿ ಬಸವಟ್ಟಿಗೆ, ತಾಲ್ಲೂಕು ಸಂಚಾಲಕ ಗಟ್ಟವಾಡಿ ಮಹೇಶ್, ತಾಲ್ಲೂಕು ಸಂಘಟನಾ ಸಂಚಾಲಕರಾದ ಸುರೇಶ್, ನಟರಾಜು, ಗಜೇಂದ್ರ, ಮರಿಸ್ವಾಮಿ, ಹೊಳೆಯಪ್ಪ, ಸಿದ್ದರಾಜು, ಬೆಳಲೆ ಮಹೇಶ್ ಸೇರಿದಂತೆ ಹಲವರು ಭಾಗವಹಿಸಿದ್ದರು.

