ಮೈಸೂರು: ಬೇಸಿಗೆಗೆ ಎಲ್ಲೆಲ್ಲೂ ನೀರಿಗೆ ಹಾಹಾಕಾರ ಉಂಟಾಗಿದ್ದು, ಮನುಷ್ಯ ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳಿಗೂ ನೀರಿಗೆ ಪರದಾಡುವಂತಾಗಿದೆ. ಹೀಗಾಗಿ ಪಕ್ಷಿಗಳ ದಾಹ ತಣಿಸಲು ಮೈಸೂರು ಯುವಕರು ಮುಂದಾಗಿದ್ದಾರೆ.
ಮರಕ್ಕೆ ಬೌಲ್ ಕಟ್ಟಿ ಪಕ್ಷಿಗಳಿಗೆ ಯುವಕರು ನೀರುಣಿಸಿದರು. ಹುಣಸೂರು ತಾಲ್ಲೂಕಿನ ಆಯರಹಳ್ಳಿ ಪ್ರವೀಣ್ ಮತ್ತು ತಂಡದಿಂದ ವಿನೂತನ ಸೇವೆ ಮಾಡಲಾಯಿತು. ಪ್ಲಾಸ್ಟಿಕ್ ಡಬ್ಬಗಳಿಗೆ ನೀರು ತುಂಬಿ ಯುವಕರ ತಂಡ ಮರಕ್ಕೆ ತೂಗು ಹಾಕಿದರು.

ಆಯರಹಳ್ಳಿ ಪ್ರವೀಣ್ ಮತ್ತು ತಂಡದ ಕಾರ್ಯಕ್ಕೆ ಇತಿಹಾಸಕಾರ ಧರ್ಮೇಂದ್ರ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ಯುವಕರ ಜೊತೆ ಸೇರಿ ಪಕ್ಷಿಗಳಿಗೆ ನೀರೊದಗಿಸುವ ಕಾರ್ಯದಲ್ಲಿ ಧರ್ಮೇಂದ್ರ ಭಾಗಿಯಾದರು.
ಮೈಸೂರಿನ ಹೊರವಲಯದ ಹಲವು ಭಾಗಗಳಲ್ಲಿ ಪಕ್ಷಿಗಳಿಗೆ ಯುವಕರಿಂದ ನೀರಿನ ವ್ಯವಸ್ಥೆ ಮಾಡಲಾಯಿತು. ಅರಣ್ಯ, ವನ್ಯಜೀವಿ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕು. ಬೇಸಿಗೆ ಕಾಲ ಮುಗಿಯುವವರೆಗೂ ಎಲ್ಲರೂ ಪ್ರಾಣಿ ಪಕ್ಷಿಗಳಿಗೆ ನೀರೊದಗಿಸುವ ಕೆಲಸ ಮಾಡಬೇಕು. ನೀರಿನ ತೊಂದರೆ ಇರುವ ಕಡೆಗಳಲ್ಲಿ ಸಾಧ್ಯವಾದಷ್ಟು ನೀರಿನ ವ್ಯವಸ್ಥೆ ಮಾಡಬೇಕು ಎಂದು ಸರ್ವರಲ್ಲೂ ಯುವಕರ ತಂಡ ಮನವಿ ಮಾಡಿದರು.

