ಮೈಸೂರು: ಬಾರ್ ತೆರೆಯಲು ಅವಕಾಶ ನೀಡದಂತೆ ಹುಣಸೂರು ತಾಲೂಕಿನ ಹೊಸರಾಮನಹಳ್ಳಿ ಗ್ರಾಮಸ್ಥರು ಪಿಡಿಓಗೆ ಮನವಿ ಸಲ್ಲಿಸಿದ್ದಾರೆ.

ಹುಣಸೂರು ತಾಲ್ಲೂಕಿನ ಬೋಳನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೊಸರಾಮನಹಳ್ಳಿಯಲ್ಲಿ ಬಾರ್ ತೆರೆಯುವುದಕ್ಕೆ ಭಾರಿ ವಿರೋಧ ವ್ಯಕ್ತವಾಗಿದೆ. ಗ್ರಾಮದಲ್ಲಿ ಅಂಚೆ ಕಛೇರಿ, ಬ್ಯಾಂಕ್, ಆಸ್ಪತ್ರೆ, ನ್ಯಾಯಬೆಲೆ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಸೇರಿ ವಿವಿಧ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.

ಪ್ರತಿದಿನ ನೂರಾರು ಜನ, ಮಹಿಳೆಯರು, ವಿದ್ಯಾರ್ಥಿಗಳು ಶಾಲಾ-ಕಾಲೇಜು, ವ್ಯವಹಾರಕ್ಕೆ ಗ್ರಾಮಕ್ಕೆ ಆಗಮಿಸುತ್ತಾರೆ. ಗ್ರಾಮದಲ್ಲಿ ಮದ್ಯದಂಗಡಿ ತೆರೆಯುವುದರಿಂದ ನಾನಾ ರೀತಿ ಸಮಸ್ಯೆ ಎದುರಾಗುತ್ತದೆ. ಹಾಗಾಗಿ ಮದ್ಯದ ಅಂಗಡಿಗೆ ಅನುಮತಿ ನೀಡಬಾರದೆಂದು ಪಿಡಿಓಗೆ ಮನವಿ ಸಲ್ಲಿಸಿದ್ದಾರೆ.

ಯಶ್ವಂತ್ ಹೆಚ್.ಆರ್ ಮತ್ತು ಹೆಚ್.ಎ ಮಾಲೇಗೌಡರಿಂದ ಬಾರ್ ತೆರೆಯಲು ಎನ್ಒಸಿಗಾಗಿ ಅರ್ಜಿ ಸಲ್ಲಿಸಲಾಗಿದೆ. ಅರ್ಜಿ ತಿರಸ್ಕರಿಸುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಅಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಗ್ರಾಮದ ಹಿತ ಕಾಯಬೇಕೆಂದು ವಿನಂತಿ ಮಾಡಿದ್ದಾರೆ. ಬಾರ್ ಅಥವಾ ಯಾವುದೇ ರೀತಿಯ ಮದ್ಯದಂಗಡಿ ಪ್ರಾರಂಭಿಸಿದರೆ ರೈತ ಸಂಘ, ಸ್ತ್ರೀ ಶಕ್ತಿ ಸೇರಿ ವಿವಿಧ ಸಂಘಟನೆಗಳು ಮತ್ತು ಗ್ರಾಮಸ್ಥರು ಉಗ್ರ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.