ನಂಜನಗೂಡು: ಬೇಸಿಗೆ ಹಿನ್ನೆಲೆಯಲ್ಲಿ ಕುಡಿಯುವ ನೀರಿಗಾಗಿ ಜನ, ಜಾನುವಾರುಗಳು ತತ್ತರಿಸುವಂತಾಗಿವೆ. ಜೀವ ಜಲಕ್ಕಾಗಿ ಗ್ರಾಮಸ್ಥರು ಅಲೆದಾಡುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ನಂಜನಗೂಡು ತಾಲ್ಲೂಕಿನ ಕಾಮಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗಾಗಿ ಗ್ರಾಮಸ್ಥರು ಪರದಾಡುವಂತಾಗಿದೆ.
ಬಿಳಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಕಾಮಹಳ್ಳಿ ಗ್ರಾಮದಲ್ಲಿ ಸುಮಾರು 2 ಸಾವಿರ ಜನಸಂಖ್ಯೆ ಇದೆ. ಗ್ರಾಮದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕ ಕಾರ್ಯನಿರ್ವಹಿಸದೆ ಕೆಟ್ಟು ನಿಂತಿದೆ. ತೊಂಬೆ ನಲ್ಲಿಗಳಿಗೂ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. ಸುತ್ತೂರಿನ ಕಪಿಲಾ ನದಿಯಿಂದ ನೀರು ಗ್ರಾಮಕ್ಕೆ ಬರುತ್ತಿಲ್ಲ. ಕುಡಿಯುವ ನೀರನ್ನು ನಾಲ್ಕು ದಿನಕ್ಕೆ ಒಂದು ಸಾರಿ ಮಾತ್ರ ಬಿಡುತ್ತಾರೆ. ಇದರಿಂದ ಗ್ರಾಮದಲ್ಲಿ ಜನರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ.
ಗ್ರಾಮದಲ್ಲಿರುವ ಕೃಷಿ ಪಂಪ್ ಸೆಟ್ ಗಳಿಗೆ ಗ್ರಾಮದ ಮಹಿಳೆಯರು ಮತ್ತು ಗ್ರಾಮಸ್ಥರು ಹೋಗಿ ನೀರನ್ನು ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಏಳು ತಿಂಗಳಿನಿಂದಲೂ ಕುಡಿಯುವ ನೀರಿಲ್ಲದೆ ನಾವು ಪರದಾಡುತ್ತಿದ್ದೇವೆ. ಶುದ್ಧ ಕುಡಿಯುವ ನೀರು ತರಲು ಪಕ್ಕದ ಗ್ರಾಮಕ್ಕೆ ಹೋಗಿ ತರುತ್ತೇವೆ. ನೀರಿಲ್ಲದೆ ನಾವು ನಾಲ್ಕು ದಿನಕ್ಕೆ ಒಂದು ಬಾರಿ ಸ್ನಾನ ಮಾಡುತ್ತೇವೆ.
ಈ ಬಗ್ಗೆ ಬಿಳಿಗೆರೆ ಗ್ರಾಮ ಪಂಚಾಯಿತಿಗೆ ಎಷ್ಟೇ ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ನಿರ್ಲಕ್ಷ್ಯ ವಹಿಸಿದೆ. ಹೆಸರಿಗಷ್ಟೇ ಮುಖ್ಯಮಂತ್ರಿಗಳ ಕ್ಷೇತ್ರವಾಗಿದೆ. ಆದರೆ, ಪ್ರಯೋಜನವಿಲ್ಲ ಸಿದ್ದರಾಮಯ್ಯರವರು ಪ್ರತಿನಿಧಿಸುವ ಕ್ಷೇತ್ರದಲ್ಲಿಯೇ ಈಗಾದರೆ ಹೇಗೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ. ಇನ್ನಾದರೂ ತಾಲ್ಲೂಕು ಆಡಳಿತ ಕುಡಿಯುವ ನೀರನ್ನು ಪೂರೈಕೆ ಮಾಡುವವರೇ ಕಾದು ನೋಡಬೇಕಿದೆ.

