ಮೈಸೂರು: ಪಡಿತರ ವಿತರಣೆಯಲ್ಲಿ ವ್ಯತ್ಯಾಸವಾಗಿ ಮಾಸಾಂತ್ಯ ಕಳೆದರು ಗ್ರಾಮದಲ್ಲಿ ಪಡಿತರ ವಿತರಣೆ ಮಾಡದಿರುವುದನ್ನು ಖಂಡಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಹೆಚ್ ಡಿ ಕೋಟೆಯಲ್ಲಿ ನಡೆದಿದೆ.

ಹೆಚ್ ಡಿ ಕೋಟೆ ತಾಲೂಕು ಅಡಹಳ್ಳಿ ಗ್ರಾಮದಲ್ಲಿ ಪ್ರಾಮಾಣಿಕವಾಗಿ ವಿತರಣೆ ಮಾಡುತ್ತಿದ್ದ ನ್ಯಾಯಬೆಲೆ ಅಂಗಡಿ ಮಾಲೀಕರ ವಿರುದ್ಧ ರಾಜಕೀಯ ದುರುದ್ದೇಶ ಹಾಗೂ ಅಧಿಕಾರಿಗಳ ಪಿತೂರಿಯಿಂದ ಪಡಿತರ ವಿತರಣೆಯನ್ನು ರದ್ದು ಮಾಡಿ ದೂರದ ವ್ಯಕ್ತಿ ಒಬ್ಬರಿಗೆ ಮಾರಾಟ ಮಾಡಲು ಅನುಮತಿ ನೀಡಿರುವ ಆಹಾರ ಇಲಾಖೆ ವಿರುದ್ಧ ಗ್ರಾಮಸ್ಥರು ಹಾಗೂ ರೈತರು ಸಿಡಿದೆದ್ದು ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ತಾಲೂಕು ಕಚೇರಿ ಮುಂಭಾಗ ಜಮಾಹಿಸಿದ ಪ್ರತಿಭಟನಾಕಾರರು ಆಹಾರ ಇಲಾಖೆ ಅಧಿಕಾರಿಗಳ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಗ್ರಾಮಸ್ಥರು ಹಾಗೂ ರೈತ ಮುಖಂಡರು ಮಾತನಾಡಿ ನಮ್ಮ ಗ್ರಾಮದ ಪಡಿತರ ಲೈಸನ್ಸ್ ದಾರರು ಪ್ರಾಮಾಣಿಕವಾಗಿ ಪಡಿತರ ತಂದು ಗ್ರಾಮದಲ್ಲಿ ವಿತರಣೆ ಮಾಡುತ್ತಿದ್ದಾರೆ ಆದರೂ ಯಾವುದೇ ದೂರುಗಳಿಲ್ಲದಿದ್ದರೂ ರಾಜಕೀಯ ಚಿತಾವಣೆ ಹಾಗೂ ಅಧಿಕಾರಿಗಳ ಪಿತೂರಿಯಿಂದ ಈ ರೀತಿ ರದ್ದು ಮಾಡಿ ದೂರದ ಊರಿನ ಬೇರೆ ಲೈಸೆನ್ಸ್ ದಾರರಿಂದ ಹಣ ಪಡೆದು ಅವರಿಗೆ ಅನುಮತಿ ನೀಡಿರುವುದು ಖಂಡನೀಯ ವಯಸ್ಸಾದವರು ಮಹಿಳೆಯರು ದೂರದ ಊರುಗಳಿಗೆ ತೆರಳಿ ಪಡಿತರ ಪಡೆಯುವುದಕ್ಕಾಗುವುದಿಲ್ಲ.

ನಮ್ಮ ಗ್ರಾಮಕ್ಕೆ ತಂದು ವಿತರಣೆ ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ ಹೆಚ್ ಡಿ ಕೋಟೆ ತಾಲೂಕು ಕಚೇರಿಯಲ್ಲಿ ಯಾವುದೇ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ ಇನ್ನು ಆಹಾರ ಇಲಾಖೆ ಅಧಿಕಾರಿಗಳು ಸಹ ಸರಿಯಾಗಿ ಕೆಲಸ ನಿರ್ವಹಿಸದೆ ಹಣ ಕೊಟ್ಟವರಿಗೆ ಪಡಿತರ ವಿತರಣೆ ಮಾಡಲು ಅವಕಾಶ ಮಾಡಿಕೊಡುವ ದಂದೆ ಮಾಡಿಕೊಂಡಿದ್ದಾರೆ ಸಂಬಂಧ ಪಟ್ಟ ಸಚಿವರು ಜಿಲ್ಲಾಧಿಕಾರಿಗಳು ಇದರ ಬಗ್ಗೆ ನಿಗ ವಹಿಸಿ ಅವರ ಮೇಲೆ ಸರಿಯಾದ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ತಾಲೂಕು ಆಡಳಿತದ ಬಗ್ಗೆ ಕಿಡಿ ಕಾರಿದರು.

ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಫುಡ್ ಶಿರಸ್ತೆದಾರ್ ಅವರನ್ನು ತರಾಟೆಗೆ ತೆಗೆದುಕೊಂಡ ರೈತ ಮುಖಂಡರು ಕೂಡಲೇ ನಮ್ಮ ಗ್ರಾಮಕ್ಕೆ ಪಡಿತರ ನೀಡಬೇಕು ಇಲ್ಲವಾದಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರು ಬರುವವರೆಗೆ ಪ್ರತಿಭಟನೆ ಕೈ ಬಿಡುವುದಿಲ್ಲ ಎಂದು ಬಿಗಿ ಪಟ್ಟು ಹಿಡಿದು ಅವರ ವಿರುದ್ಧ ವಾಗ್ದಾಳಿ ನಡೆಸಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹೊ.ಕೆ. ಮಹೇಂದ್ರ, ಕುಮಾರಸ್ವಾಮಿ, ಕೆಂಪ ಶೆಟ್ಟಿ, ನಂದಕುಮಾರ್, ಶಂಕರಲಿಂಗಪ್ಪ, ಚಂದ್ರೇಗೌಡ, ಬಾಲಕೃಷ್ಣ, ದೇವೇಶ್ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.