ನಂಜನಗೂಡು: ಸ್ಮಶಾನಕ್ಕೆ ಹೋಗುವ ರಸ್ತೆ ಒತ್ತುವರಿ ಮಾಡಿಕೊಂಡಿರುವ ಪರಿಣಾಮ ಸ್ಮಶಾನಕ್ಕೆ ತೆರಳಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ರಸ್ತೆಯಲ್ಲಿ ಶವ ಇಟ್ಟು ದಿಢೀರ್ ಪ್ರತಿಭಟನೆ ನಡೆಸಿದರು.

ನಂಜನಗೂಡು ತಾಲ್ಲೂಕಿನ ದೇವರಸನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸೂರು ಗ್ರಾಮದಲ್ಲಿ ಮಹದೇವ ಎಂಬುವವರು ಮೃತಪಟ್ಟಿದ್ದರು. ಶವ ಸಂಸ್ಕಾರಕ್ಕಾಗಿ ಗ್ರಾಮದಲ್ಲಿರುವ ಸ್ಮಶಾನಕ್ಕೆ ತೆಗೆದುಕೊಂಡು ಹೋಗುವ ಸಂದರ್ಭದಲ್ಲಿ ರಸ್ತೆಯನ್ನು ಧರ್ಮ, ರಾಮಚಂದ್ರ, ಸಿದ್ದಪ್ಪ ಎಂಬುವವರು ದಾರಿಯನ್ನು ಬಿಡದೆ ಒತ್ತುವರಿ ಮಾಡಿಕೊಂಡು ಗದ್ದೆ ಮಾಡಿದ್ದಾರೆ.

ಇದರಿಂದ ಅಂತ್ಯಕ್ರಿಯೆಗೆ ತುಂಬಾ ತೊಂದರೆಯಾಗಿದೆ ಎಂದು ಗ್ರಾಮಸ್ಥರು ಶವ ಇಟ್ಟು ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.  ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ. ನಮಗೆ ರಸ್ತೆಯನ್ನು ಬಿಡಿಸುವ ತನಕ ಶವವನ್ನು ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ.