ನಂಜನಗೂಡು: ನಗರಸಭಾ ವ್ಯಾಪ್ತಿಯಲ್ಲಿ ಸುಮಾರು 2.85 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ, ಚರಂಡಿ, ಪಾರ್ಕ್ ಹಾಗೂ ಮೂಲಭೂತ ಸೌಕರ್ಯ ಕಾಮಗಾರಿಗಳಿಗೆ ಶಾಸಕ ದರ್ಶನ್ ಧ್ರುವನಾರಾಯಣ ಅವರು ಭೂಮಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದರು.

ನಗರದ 15 ವಾರ್ಡ್‌ಗಳಲ್ಲಿ ಅನುಮೋದನೆಗೊಂಡಿರುವ ಕಾಮಗಾರಿಗಳು ಹಾಗೂ ಯುಐಡಿಎಫ್ ಅನುದಾನದಡಿ ಎಲೆಕ್ಟ್ರಿಕ್ ಚಿತಾಗಾರ ನಿರ್ಮಾಣ ಕಾಮಗಾರಿಗೆ ಅವರು ಚಾಲನೆ ನೀಡಿದರು. ವಾರ್ಡ್ ನಂ.3 ರಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ, ಕಟಗಾರ ಎಲೆಕ್ಟ್ರಿಕ್ ಚಿತಾಗಾರ ನಿರ್ಮಾಣ, ಪಾರ್ಕ್ ಅಭಿವೃದ್ಧಿ, ಟೀಚರ್ ಲೇಔಟ್ ಪಾರ್ಕ್, ಹೌಸಿಂಗ್ ಬೋರ್ಡ್‌ನ 3 ಪಾರ್ಕ್, ನರಸಿಂಹ ಬಡಾವಣೆ ಪಾರ್ಕ್, ಕಲಾಮಂದಿರ ಮುಂಭಾಗದ ಪಾರ್ಕ್‌ಗೆ ಆಟಿಕೆ,

ಬೆಂಚ್ ಅಳವಡಿಕೆ, ರಸ್ತೆ ಅಭಿವೃದ್ಧಿಗಾಗಿ ಚಾಮರಾಜನಗರ ಬೈಪಾಸ್‌ನಿಂದ ಲಿಂಗಭಟ್ಟರಗುಡಿ, ಕಾಶಿ ವಿಶ್ವೇಶ್ವರ ದೇವಸ್ಥಾನದವರೆಗೆ ರಸ್ತೆ ಅಭಿವೃದ್ಧಿ, ಕಾಶಿ ವಿಶ್ವನಾಥ ದೇವಾಲಯಕ್ಕೆ ಹೋಗುವ ರಸ್ತೆ ಅಭಿವೃದ್ಧಿ, ಅಮೃತ ನಗರೋತ್ಥಾನ ಯೋಜನೆಯಲ್ಲಿ ಅಶೋಕಪುರಂ ಮುಖ್ಯರಸ್ತೆ (ಎಂ.ಜಿ.ಎಸ್ ರಸ್ತೆ ಹೊಂದಿಕೊಂಡಂತೆ) ಅಭಿವೃದ್ಧಿ, ಎರಡೂ ಕಡೆ ಫುಟ್‌ಪಾತ್‌ಗೆ ಇಂಟರ್‌ಲಾಕ್, ಚರಂಡಿಗೆ ಸ್ಲಾಬ್ ಅಳವಡಿಕೆ, ಪಾರಂಪರಿಕ ದೀಪ ಅಳವಡಿಕೆ,

ಮೈಸೂರು ರಸ್ತೆಯಿಂದ ಮುಸ್ಲಿಂ ಸ್ಮಶಾನದವರೆಗೆ ಚರಂಡಿ ಮತ್ತು ರಸ್ತೆ ಅಭಿವೃದ್ಧಿ, ಅಶೋಕಪುರಂ 2ನೇ ಮತ್ತು 3ನೇ ಕ್ರಾಸ್ ಮಧ್ಯ ಕನ್ವೆನ್ಸಿ ಗಲ್ಲಿಯಲ್ಲಿ ರಸ್ತೆ, ಗ್ರೀನ್ಸ್ ಹೋಟೆಲ್ ಹಿಂಭಾಗದಿಂದ ಬಿದರಹಳ್ಳಿಹುಂಡಿ ಚಿಕ್ಕಣ್ಣನ ಮನೆವರೆಗೆ ರಸ್ತೆ ಅಭಿವೃದ್ಧಿಗೆ 50 ಲಕ್ಷ ರೂ. ವೆಚ್ಚದ ಗುದ್ದಲಿ ಪೂಜೆ ನೆರವೇರಿಸಿದರು.

ಶಾಸಕ ದರ್ಶನ್ ಧ್ರುವನಾರಾಯಣ ಮಾತನಾಡಿ, ಹೊಸ ಬಡಾವಣೆಗಳ ಅಭಿವೃದ್ಧಿ ಹಾಗೂ ಹಳೆ ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಲು ಆದ್ಯತೆ ನೀಡಲಾಗುವುದು. ಯುಜಿಡಿ ಕಾಮಗಾರಿಯ ಮೂಲಕ ಸಮಸ್ಯೆ ಬಗೆಹರಿಸಲಾಗುವುದು. ಕಾಮಗಾರಿಗಳಲ್ಲಿ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು. ಏನಾದರೂ ಸಮಸ್ಯೆ ಇದ್ದರೆ ನೇರವಾಗಿ ನನಗೆ ಅಥವಾ ನಗರಸಭಾ ಅಧಿಕಾರಿಗಳಿಗೆ ತಿಳಿಸಬೇಕು. ಮನೆಗಳ ಕೊರತೆ ಮತ್ತು ಕಾಮಗಾರಿ ವಿಳಂಬದ ಬಗ್ಗೆ ಪ್ರತ್ಯೇಕ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಮಾಜಿ ನಗರಸಭಾ ಅಧ್ಯಕ್ಷ ಶ್ರೀಕಂಠ ಸ್ವಾಮಿ, ನಗರ ಬ್ಲಾಕ್ ಅಧ್ಯಕ್ಷ ಸಿ.ಎಂ.ಶಂಕರ್, ನಗರಸಭಾ ಪೌರಾಯುಕ್ತ ಬಸವರಾಜ್, ಮುಖಂಡರಾದ ಶ್ರೀಧರ್, ದೇವರಾಜು, ಪ್ರಕಾಶ್, ಖಾಲಿದ್ ಅಹಮದ್, ವಿಜಯಲಕ್ಷ್ಮಿ, ಕುಮಾರ್, ಚಂದ್ರು, ಸ್ವಾಮಿ, ರಾಜೇಶ್, ಅರೂರಪ್ಪ, ಪುಟ್ಟಸ್ವಾಮಿ, ರವಿ ಸೇರಿದಂತೆ ಹಲವು ಮುಖಂಡರು, ಕಾರ್ಯಕರ್ತರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.