ನಂಜನಗೂಡು: ನಗರದ ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಯಲ್ಲಿ ಮಾಜಿ ಸಂಸದ ದಿವಂಗತ ವಿ. ಶ್ರೀನಿವಾಸ್ ಪ್ರಸಾದ್ ಅವರ 79ನೇ ವರ್ಷದ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿ.ಶ್ರೀನಿವಾಸ್ ಪ್ರಸಾದ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ, ಶಾಲಾ ಮಕ್ಕಳಿಗೆ ಸಿಹಿ, ಬೆಳಗಿನ ಉಪಹಾರ ನೀಡುವ ಮೂಲಕ ಅವರನ್ನು ಸ್ಮರಿಸಲಾಯಿತು. ಬಳಿಕ ಮೈಸೂರು ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಕುಂಬ್ರಹಳ್ಳಿ ಸುಬ್ಬಣ್ಣ ಮಾತನಾಡಿ, ರಾಜಕೀಯ ಮುತ್ಸದ್ದಿ, ಸ್ವಾಭಿಮಾನಿ ಚಕ್ರವರ್ತಿ ಎಂಬ ಹೆಸರು ಪಡೆದಿದ್ದ ವಿ. ಶ್ರೀನಿವಾಸ್ ಪ್ರಸಾದ್ ಅವರ ಜನ್ಮದಿನವನ್ನು ಪ್ರತಿ ವರ್ಷವೂ ಆಚರಿಸುತ್ತಿದ್ದೇವೆ.
ಅವರು ಶಿಕ್ಷಣದ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರು. ಅದಕ್ಕಾಗಿಯೇ ನಂಜನಗೂಡಿನಲ್ಲಿ ಪ್ರತಿಭಾನ್ವಿತ ಬಾಲಕಿಯರ ವಸತಿ ಶಾಲೆಯನ್ನು ತೆರೆದಿದ್ದರು. ಹಾಗಾಗಿ ಈ ಶಾಲೆಯಲ್ಲಿಯೇ ಅವರನ್ನು ಸ್ಮರಿಸುತ್ತಿದ್ದೇವೆ. ಅಂತಹ ಸ್ವಾಭಿಮಾನಿ ರಾಜಕಾರಣಿಯನ್ನು ಇಂದು ನಾವು ಕಾಣಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
50 ವರ್ಷಗಳ ಕಾಲ ಸುದೀರ್ಘ ರಾಜಕೀಯ ಸೇವೆ ಸಲ್ಲಿಸಿದ ಅವರು 2 ಬಾರಿ ಶಾಸಕರು, 6 ಬಾರಿ ಸಂಸದರಾಗಿದ್ದರು. ಬಡವರು, ದೀನ-ದಲಿತರ ಬಗ್ಗೆ ಹೆಚ್ಚು ಯೋಚನೆ ಮಾಡುತ್ತಿದ್ದರು. ನಂಜನಗೂಡಿನಲ್ಲಿ ಮಿನಿ ವಿಧಾನಸೌಧ, ವಸತಿ ಶಾಲೆಗಳು, ಅಂಬೇಡ್ಕರ್ ಭವನಗಳನ್ನು ತಮ್ಮ ಸ್ವಂತ ಮನೆಯಂತೆ ಕಟ್ಟಿಸಿದ್ದಾರೆ. ಅವರ ಆದರ್ಶಗಳು ಜೀವಂತವಾಗಿವೆ ಎಂದು ಅವರು ಹೇಳಿದರು.
ನಂತರ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಎಸ್. ಮಹದೇವಯ್ಯ ಮಾತನಾಡಿ, ಪ್ರಸಾದ್ ಅವರು ನೇರ-ನಡೆ-ನುಡಿ ಇರುವ ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ಅವರು ಸಂಸದರಾಗಿದ್ದಾಗ ಇಡೀ ದೇಶದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೂಲ ಕಾರಣರಾಗಿದ್ದರು. ಅವರ ದೂರದೃಷ್ಟಿಯಿಂದಲೇ ಎಲ್ಲಾ ಸಮುದಾಯಗಳಿಗೂ ಭವನಗಳು ನಿರ್ಮಾಣವಾಗುತ್ತಿವೆ ಎಂದು ತಿಳಿಸಿದರು.
ಹಿರಿಯ ಮುಖಂಡ ಹಾಗೂ ಪ್ರಥಮ ದರ್ಜೆ ಗುತ್ತಿಗೆದಾರರಾದ ಪದ್ಮನಾಭರಾವ್ ಮಾತನಾಡಿ, ಕರ್ನಾಟಕದಲ್ಲಿ ಶ್ರೀನಿವಾಸ್ ಪ್ರಸಾದ್ ಅವರಂತಹ ಶ್ರೇಷ್ಠ ರಾಜಕಾರಣಿ ಮತ್ತೊಬ್ಬರಿಲ್ಲ. ಅತ್ಯಂತ ಸರಳ, ಸಜ್ಜನಿಕೆಯ ಸ್ವಾಭಿಮಾನಿ ವ್ಯಕ್ತಿಯಾಗಿದ್ದರು. ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ರಾಜೀನಾಮೆ ನೀಡಿ ಹೊರಬಂದಿದ್ದರು ಎಂದು ಸ್ಮರಿಸಿದರು. ಅವರಿಗೆ ಬಿಜೆಪಿಗೆ ಸೇರುವ ಮನಸ್ಸು ಇರಲಿಲ್ಲ. ಜೆಡಿಎಸ್ ಪಕ್ಷದ ಕಡೆ ಒಲವಿತ್ತು. ಎಲ್ಲರ ಒತ್ತಡದ ಮೇಲೆ ಬಿಜೆಪಿಗೆ ಸೇರ್ಪಡೆಯಾದರು. ಲೋಕಸಭಾ ಚುನಾವಣೆಯಲ್ಲಿ ಗೆದ್ದು ಸಂಸದರಾದರು ಎಂದರು.
ಈ ಸಂದರ್ಭದಲ್ಲಿ ಮಾಜಿ ತಾಪಂ ಅಧ್ಯಕ್ಷ ಮಹದೇವಪ್ಪ, ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಸಿಂಧುವಳ್ಳಿ ಕೆಂಪಣ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ನಾಗೇಂದ್ರ, ವಕೀಲರಾದ ಬೊಮ್ಮಾಯಿ, ಮುಖಂಡ ಮಲ್ಕುಂಡಿ ಪುಟ್ಟಸ್ವಾಮಿ, ಪ್ರಾಂಶುಪಾಲರಾದ ಶಿಲ್ಪಾ, ಸೇರಿದಂತೆ ಶ್ರೀನಿವಾಸ್ ಪ್ರಸಾದ್ ಅಭಿಮಾನಿಗಳು ಮತ್ತು ಶಾಲಾ ಮಕ್ಕಳು ಹಾಜರಿದ್ದರು.

