ನಂಜನಗೂಡು: ಮೇಕೆಗಳನ್ನು ಮೇಯಿಸುತ್ತಿದ್ದ ಆದಿವಾಸಿ ಮಹಿಳೆಯ ಮೇಲೆ ಹುಲಿ ದಾಳಿ ನಡೆಸಿ ಕೊಂದು ಹಾಕಿರುವ ಭೀಕರ ಘಟನೆ ನಂಜನಗೂಡು ತಾಲೂಕಿನ ಕಟ್ಟಕಡೆಯ ಕಾಡಂಚಿನ ಗ್ರಾಮವಾದ ಡೋರನಕಟ್ಟೆ ಕಾಲೋನಿಯಲ್ಲಿ ನಡೆದಿದ್ದು, ಅರಣ್ಯ ಇಲಾಖೆ ನೊಂದ ಕುಟುಂಬಕ್ಕೆ 20 ಲಕ್ಷ ರೂ ಚೆಕ್ ವಿತರಣೆ ಮಾಡಿದೆ.

ಗ್ರಾಮದ ಮಾಚಮ್ಮ (45) ಮೃತ ದುರ್ದೈವಿ. ಮಧ್ಯಾಹ್ನ ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ಪೊದೆಯಲ್ಲಿ ಅಡಗಿದ್ದ ಹುಲಿಯೊಂದು ಏಕಾಏಕಿ ದಾಳಿ ನಡೆಸಿ, ಆಕೆಯನ್ನು ನಂಜದೇವರ ಬೆಟ್ಟದ ಕಡೆಗೆ ಎಳೆದೊಯ್ದಿದೆ ಎನ್ನಲಾಗಿದೆ. ಅಕ್ಕಪಕ್ಕದಲ್ಲಿದ್ದವರು ಕೂಗಿಕೊಂಡರೂ ಮಹಿಳೆಯನ್ನು ರಕ್ಷಿಸಲು ಸಾಧ್ಯವಾಗಿಲ್ಲ.

ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಕಾಡಿನೊಳಗೆ ಹಲವು ಗಂಟೆಗಳ ಕಾಲ ಶೋಧ ಕಾರ್ಯ ನಡೆಸಿದ್ದಾರೆ. ಕೊನೆಗೆ ಸಂಜೆ 5 ಗಂಟೆ ಸುಮಾರಿಗೆ ಮಹಿಳೆಯ ಮೃತದೇಹ ಪತ್ತೆಯಾಗಿದ್ದು, ಹೊರಕ್ಕೆ ತರಲಾಗಿದೆ. ಹುಲಿ ದಾಳಿಯಿಂದ ದೇಹದ ಹಲವು ಭಾಗಗಳಿಗೆ ಹಾನಿಯಾಗಿರುವುದು ಕಂಡುಬಂದಿದೆ.

ಈ ಭಾಗದಲ್ಲಿ ಈ ಹಿಂದೆಯೂ ಹುಲಿ ದಾಳಿಯಿಂದ ರೈತರು ಹಾಗೂ ಸಾರ್ವಜನಿಕರು ತೊಂದರೆಗೀಡಾಗಿದ್ದು, ಇದೀಗ ಮತ್ತೊಂದು ಬಲಿ ಸಂಭವಿಸಿರುವುದಕ್ಕೆ ಗ್ರಾಮಸ್ಥರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ. ಕೇವಲ ಪರಿಹಾರ ನೀಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಕಾಡಂಚಿನ ಗ್ರಾಮಗಳ ಜನರಿಗೆ ಕಾಡುಪ್ರಾಣಿಗಳಿಂದ ಶಾಶ್ವತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಸಿಎಫ್ ನಂದೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತ ಮಹಿಳೆಯ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರದ ಚೆಕ್ ವಿತರಿಸಿದರು. ಹುಲಿಯನ್ನು ಸೆರೆಹಿಡಿಯಲು ಎಲಿಫೆಂಟ್ ಫೋರ್ಸ್ ಮೂಲಕ ಕಾರ್ಯಾಚರಣೆ ನಡೆಸುವಂತೆ ಆದೇಶಿಸಲಾಗಿದೆ ಎಂದು ತಿಳಿಸಿದರು.

ಮೃತದೇಹವನ್ನು ಹೆಡಿಯಾಲ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಸ್ಥಳದಲ್ಲಿ ಪೊಲೀಸ್ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.