ನಂಜನಗೂಡು: ಕಿರಿದಾದ ರಾಜ್ಯ ಹೆದ್ದಾರಿಯ ರಸ್ತೆಯಲ್ಲಿ ವಾಹನ ಸವಾರರಿಗೆ ಸಂಚರಿಸಲು ಕಿರಿಕಿರಿಯಾಗಿದ್ದು ರಸ್ತೆಯನ್ನು ಅಗಲೀಕರಣ ಮಾಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಗ್ರಾಮದ ರಾಜ್ಯ ಹೆದ್ದಾರಿ 57ರಲ್ಲಿ ಬರುವ ಬಾಗಲಕೋಟೆ-ಬಿಳಿಗಿರಿರಂಗನಬೆಟ್ಟ ರಾಜ್ಯ ಹೆದ್ದಾರಿಯೂ ಹುಲ್ಲಹಳ್ಳಿಯಲ್ಲಿ ಕಿರಿದಾಗಿದ್ದು, ಈ ರಸ್ತೆಯಲ್ಲಿ ಸಂಚರಿಸಬೇಕಾದರೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು,

ರಸ್ತೆಯ ಅಕ್ಕ ಪಕ್ಕದಲ್ಲಿರುವ ಮತ್ತು ರಸ್ತೆ ಮಧ್ಯದಲ್ಲಿ ಹಾದು ಹೋಗಿರುವ ಚರಂಡಿ ಕುಸಿದು ಬಿದ್ದಿದೆ. ಕಬ್ಬು ತುಂಬಿದ ಲಾರಿ ಚರಂಡಿಗೆ ಸಿಲುಕಿಕೊಂಡು ಪರದಾಡಿದ್ದು, ಕಿರಿದಾಗಿರುವ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ಹರಸಾಹಸ ಪಡುತ್ತಿದ್ದಾರೆ.
ಈ ರಸ್ತೆಯು ಶ್ರೀ ಕ್ಷೇತ್ರ ಸಂಗಮ, ಶ್ರೀ ಚಿಕ್ಕಮ್ಮ ಚಿಕ್ಕದೇವಿ ಬೆಟ್ಟ, ನಂಜನಗೂಡು, ಬಿಳಿಗಿರಿರಂಗನ ಬೆಟ್ಟ, ಮಹದೇಶ್ವರ ಬೆಟ್ಟ ಸೇರಿದಂತೆ ಪ್ರವಾಸಿ ತಾಣಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಈ ಕೂಡಲೇ ರಾಜ್ಯ ಹೆದ್ದಾರಿಯ ಪ್ರಾಧಿಕಾರವು ರಸ್ತೆಯನ್ನು ಮೇಲ್ದರ್ಜೆಗೆ ಏರಿಸಿ ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

