ಮೈಸೂರು : ಶಿವರಾಂಪೇಟೆ ಮಳಿಗೆದಾರನ ಮೇಲೆ ಹಲ್ಲೆ ಖಂಡಿಸಿ ವರ್ತಕರಿಂದ ಅಂಗಡಿ ಮುಂಗಟ್ಟು ಬಂದ್ ಮಾಡಿ ಪ್ರತಿಭಟನೆ ನಡೆಸಲಾಯಿತು. ಹಫ್ತಾ ವಸೂಲಿಕೋರರ ವಿರುದ್ದ ವರ್ತಕರ ಆಕ್ರೋಶ ಹೊರಹಾಕಿದರು.
ಮೈಸೂರಿನ ಶಿವರಾಂಪೇಟೆಯಲ್ಲಿ ಮಳಿಗೆ ನಡೆಸುತ್ತಿದ್ದ ವ್ಯಕ್ತಿ ಬಳಿ ಹಫ್ತಾ ವಸೂಲಿಗೆ ಯತ್ನಿಸಲಾಯಿತು. ಹಲ್ಲೆ ಮಾಡಿದ್ದ ವ್ಯಕ್ತಿಯನ್ನ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡಲಾಯಿತು. ಶಿವರಾಂಪೇಟೆ ವರ್ತಕರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಪ್ರತಿಭಟನೆ ನಡೆಸಿದರು.
ಶಿವರಾಂಪೇಟೆಯಲ್ಲಿ ಪ್ಲಾಸ್ಟಿಕ್ ವಸ್ತುಗಳ ಮಾರಾಟ ಮಳಿಗೆ ನಡೆಸುತ್ತಿರುವ ಬಬುತರಾಮ್ ಬಳಿ ಹಫ್ತಾ ವಸೂಲಿಗೆ ಯತ್ನ ನಡೆಯಿತು. ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ರಮೇಶ್ ಮಾಲಿ ಹಾಗೂ ಅವರ ಮಗ ಚಂದ್ರಪ್ರಕಾಶ್ ದೇವರಾಜ ಅರಸ್ ರಸ್ತೆಯಲ್ಲಿ ಅಡ್ಡ ಹಾಕಿ ಒಂದು ಲಕ್ಷ ರೂ. ಹಫ್ತಾ ನೀಡುವಂತೆ ಧಮಕಿ ಹಾಕಿದ್ದಾರೆ.

ಅದಕ್ಕೆ ಒಪ್ಪದಿದ್ದಾಗ ಆತನ ಮೇಲೆ ಹಲ್ಲೆ ಮಾಡಿ, ಕಟಿಂಗ್ ಮಿಷನ್ ತಂದು ಅದರಿಂದ ಹಲ್ಲೆ ನಡೆಸಲು ಮುಂದಾಗಿದ್ದಾಗ ಅಕ್ಕಪಕ್ಕದಲ್ಲಿದ್ದ ವರ್ತಕರು ಅದನ್ನು ತಡೆದಿದ್ದಾರೆ. ಗಲಾಟೆ ತಡೆಯಲು ಹೋದ ನಗರಪಾಲಿಕೆ ಮಾಜಿ ಸದಸ್ಯ ಪ್ರಶಾಂತ್ ಗೌಡ ಮೇಲೂ ಹಲ್ಲೆಗೆ ಯತ್ನಿಸಿದ್ದು, ಈ ಸಂಬಂಧ ದೇವರಾಜ ಪೊಲೀಸ್ ಠಾಣೆ ಹಲ್ಲೆಗೊಳಗಾದ ಬಬುತರಾಂ ನೀಡಿದ ದೂರಿನನ್ವಯ ಪೊಲೀಸರು ರಮೇಶ್ ಮಾಲಿ ಹಾಗೂ ಇವರ ಮಗ ಚಂದ್ರಪ್ರಕಾಶ್ ವಿರುದ್ಧ ಎಫ್.ಐ.ಆರ್. ದಾಖಲಿಸಿದ್ದಾರೆ.
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಪದೇ ಪದೇ ಶಿವರಾಂಪೇಟೆ ವರ್ತಕರಿಗೆ ಕಿರುಕುಳ ನೀಡುತ್ತಾ ಹಫ್ತಾ ವಸೂಲಿ ಮಾಡುವುದನ್ನೇ ಕಾಯಕ ಮಾಡಿಕೊಂಡಿರೋ ರಮೇಶ್ ಮಾಲಿ ಬಂಧಿಸಬೇಕೆಂದು ಒತ್ತಾಯಿಸಿದರು. ಶಿವರಾಂಪೇಟೆ ವರ್ತಕರು ಬೀದಿಗಿಳಿದು ಪ್ರತಿಭಟಿಸಿದರು.
ವರ್ತಕರ ಮೇಲಿನ ದೌರ್ಜನ್ಯ ಖಂಡಿಸಿ ಇಡೀ ದಿನ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ವರ್ತಕರ ಬೆಂಬಲಕ್ಕೆ ನಿಂತ ಸಾರ್ವಜನಿಕ ಸಂಘ ಸಂಸ್ಥೆಗಳು ಪ್ರತ್ಯೇಕ ಸಭೆ ನಡೆಸಿ ಆರೋಪಿಗಳನ್ನು ಶೀಘ್ರ ಬಂಧಿಸಿ, ವರ್ತಕರಿಗೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಲಾಯಿತು.

