ಮೈಸೂರು : ಸರಗೂರು ತಾಲ್ಲೂಕಿನಲ್ಲಿ ಹುಲಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಗ್ಗೂಡಿಲು ಗ್ರಾಮಕ್ಕೆ ಶಾಸಕ ಅನಿಲ್ ಚಿಕ್ಕಮಾದು  ಭೇಟಿ ಕೊಟ್ಟರು.

ಗ್ರಾಮದ ಹೊರವಲಯದಲ್ಲಿ ರೈತನ ಮೇಲೆ  ಹುಲಿ ದಾಳಿ ಮಾಡಿತ್ತು. ಹುಲಿ ದಾಳಿಯಿಂದ ರೈತ ದಂಡನಾಯಕ  ಮೃತಪಟ್ಟಿದ್ದನು. ನೊಂದ ರೈತ ಕುಟುಂಬಕ್ಕೆ  ಶಾಸಕ ಅನಿಲ್ ಚಿಕ್ಕಮಾದು ಸಾಂತ್ವನ ಹೇಳಿ ಧೈರ್ಯ ತುಂಬಿದರು.

ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದರು. ದಂಡನಾಯಕ ಮಕ್ಕಳಿಗೆ ವಿದ್ಯಾಭ್ಯಾಸದ ಎಲ್ಲಾ ಜವಾಬ್ದಾರಿ ನಮ್ಮದೆಂದು ಶಾಸಕ ಭರವಸೆ ನೀಡಿದರು. ಸದ್ಯ ಗ್ರಾಮದ ಸುತ್ತಮುತ್ತ  ಆತಂಕ ಮನೆ ಮಾಡಿದೆ.

ಶಾಸಕರ ಬಳಿ ತಮ್ಮ ಅಳಲನ್ನು ಗ್ರಾಮಸ್ಥರು ತೋಡಿಕೊಂಡರು.  ಮೊದಲು ಹುಲಿ ಸೆರೆ ಆಗಲಿ. ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಸಹಕಾರ ನೀಡಬೇಕು. ಸಮಸ್ಯೆಗಳನ್ನ ಸರಿಪಡಿಸುವ ಕೆಲಸ ಆಗುತ್ತದೆ ಎಂದು ಭರವಸೆ ನೀಡಿದರು.

ಗ್ರಾಮೀಣ ಭಾಗದ ಜನರಿಗೆ ಮೊದಲು ಸ್ಪಂದಿಸುವ ಕೆಲಸ ಅರಣ್ಯ ಇಲಾಖಾಧಿಕಾರಗಳು ಮಾಡಬೇಕು. ರೈತರು ಆತಂಕ ಪಡುವ ವಾತಾವರಣ ನಿರ್ಮಾಣವಾಗಿದೆ. ಜನ ಭಯಭೀತರಾಗಿದ್ದಾರೆ. ಮೊದಲು ಹುಲಿ ಸೆರೆ ಆಗಬೇಕು ಅಧಿಕಾರಿಗಳಿಗೆ  ಶಾಸಕ ಅನಿಲ್ ಚಿಕ್ಕಮಾದು ಸೂಚನೆ ಕೊಟ್ಟರು.