ಮೈಸೂರು: ಉದ್ಯಾನವನವನ್ನ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಸ್ಥಳೀಯ ಹಿರಿಯ ನಾಗರಿಕರ ಧ್ಯೇಯ. ಆದ್ರೆ ಅಲ್ಲಿನ ಸ್ಥಳೀಯರು ಸಾಕಿರುವ ಪ್ರಾಣಿಗಳ ಕಾಟ ನೆಮ್ಮದಿ ಕೆಡಿಸಿದೆ. ಪ್ರತಿದಿನ ಸಾಕು ಪ್ರಾಣಿಗಳ ಹಾವಳಿ ತಪ್ಪಿಸುವಲ್ಲಿ ಅಲ್ಲಿನ ಹಿರಿಯ ನಾಗರೀಕರು ಬವಣೆ ಪಡುತ್ತಿದ್ದಾರೆ. ಹಿರಿಯ ನಾಗರೀಕರ ಶ್ರಮಕ್ಕೆ ಸಾಕು ಪ್ರಾಣಿಗಳ ಮಾಲೀಕರ ಕ್ಷುಲ್ಲಕ ಮನಸ್ಸು ಕರಗದಿರುವುದು ವಿಪರ್ಯಾಸ.

ಮೈಸೂರಿನ ರಾಮಾನುಜ ರಸ್ತೆಯಲ್ಲಿರುವ ಅಕ್ಕಮ್ಮಣ್ಣಿ ಆಸ್ಪತ್ರೆಗೆ ಹೊಂದಿಕೊಂಡಿರುವ ಉದ್ಯಾನವನ ಇನ್ನೂ ಪಾಲಿಕೆ ವ್ಯಾಪ್ತಿಗೆ ಸೇರಿಲ್ಲ. ಹೀಗಾಗಿ ನಿರ್ವಹಣೆ ಕೊರತೆಯಿಂದ ಉದ್ಯಾನವನ ನಿರ್ಜೀವ ಹಂತ ತಲುಪಿತ್ತು. ಇಂತಹ ಪರಿಸ್ಥಿತಿಯಲ್ಲಿ ಸ್ಥಳೀಯ ಹಿರಿಯ ನಾಗರೀಕರು ಉದ್ಯಾನವನದ ಸುರಕ್ಷತೆಗೆ ಆದ್ಯತೆ ನೀಡಿ ಖುದ್ದಾಗಿ ಸ್ವಚ್ಛತೆಗೆ ಮುಂದಾದರು.

ತಮ್ಮ ವಯಸ್ಸನ್ನ ಲೆಕ್ಕಿಸದೆ ಪ್ರತಿದಿನ ಬೆಳಿಗ್ಗೆ ಹಾಗೂ ಸಂಜೆ ವೇಳೆ ಸಮರೋಪಾದಿಯಲ್ಲಿ ತೊಡಗಿಸಿಕೊಂಡು ಸ್ವಚ್ಛತೆಗೆ ಒತ್ತು ನೀಡಿದ್ದಾರೆ. ಪಾರ್ಥೇನಿಯಂ ಹಾಗೂ ಅನಾವಶ್ಯಕ ಗಿಡಗಂಟೆಗಳನ್ನ ನಿರ್ಮೂಲಗೊಳಿಸಿ ಅಂದ ಹೆಚ್ಚಿಸುವ ಹೂವಿನ ಗಿಡಗಳು ಹಾಗೂ ಕಣ್ಣಿಗೆ ತಂಪಾಗಿಸುವ ಹಸಿರು ತುಂಬಿದ ಗಿಡಗಳನ್ನ ನೆಟ್ಟು ಅಭಿವೃದ್ದಿ ಪಡಿಸುತ್ತಿದ್ದಾರೆ. ಈ ಕೆಲಸಕ್ಕೆ ಸಾಕಷ್ಟು ಬೆಂಬಲವೂ ದೊರೆಯುತ್ತಿದೆ.

ಆದ್ರೆ ಈ ಉದ್ಯಾನವನ್ನಕ್ಕೆ ಸಾಕು ಪ್ರಾಣಿಗಳ ಕಾಟವೇ ಕಾಡುತ್ತಿದೆ. ಒಂದೆಡೆ ಹಿರಿಯ ನಾಗರೀಕರು ಸ್ವಚ್ಛತೆ ಮಾಡುತ್ತಿದ್ದರು ನಾಯಿ ಹಸುಗಳು ಒಳಗೆ ನುಗ್ಗಿ ಗಿಡಗಳನ್ನ ತಿನ್ನುವುದು, ಗಲೀಜು ಮಾಡುವುದು ಹೆಚ್ಚಾಗುತ್ತಿದೆ. ಪ್ರತಿದಿನ ಈ ದೃಶ್ಯಗಳು ಕಂಡು ಬರುತ್ತಲೇ ಇದೆ. ಹಸಿರು ತುಂಬಿದ ಉದ್ಯಾನವನಗಳು ಉತ್ತಮ ಪರಿಸರಕ್ಕೆ ಉದಾಹರಣೆ. ಆದ್ರೆ ಈ ಉದ್ಯಾನವನದ ಸುತ್ತಮುತ್ತಲಿನ ಸಾಕು ಪ್ರಾಣಿಗಳ ಮಾಲೀಕರು ಇಂತಹ ಪರಿಸರ ಕಾಪಾಡಲು ಕೈ ಜೋಡಿಸದಿರುವುದು ವಿಪರ್ಯಾಸ.

ಸಾಕು ಪ್ರಾಣಿಗಳನ್ನ ನಿಯಂತ್ರಿಸುವುದು ಸಾಕಿರುವ ಮಾಲೀಕರ ಕರ್ತವ್ಯ. ಈ ಬಗ್ಗೆ ಹಿರಿಯ ನಾಗರೀಕರು ಸಾಕು ಪ್ರಾಣಿಗಳ ಮಾಲೀಕರನ್ನ ಪ್ರಶ್ನಿಸಿದರೆ ಉಡಾಫೆ ಉತ್ತರ ನೀಡುತ್ತಾರಂತೆ. ಇಂದಿನ ದಿನಗಳಲ್ಲಿ ಉದ್ಯಾನವನಗಳನ್ನ ಸಂರಕ್ಷಿಸಲು ಮುಂದೆ ಬರುವ ಜನರೇ ವಿರಳ. ಹೀಗಿರುವಾಗ ಅಲ್ಲಿನ ಹಿರಿಯ ನಾಗರೀಕರು ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಕನಿಷ್ಟಪಕ್ಷ ಸಾಕು ಪ್ರಾಣಿಗಳ ಮಾಲೀಕರು ಇವರ ಶ್ರಮಕ್ಕಾದರೂ ಗೌರವಿಸಲಿ. ಮುಂದಾದರೂ ಇಂತಹ ಸಾಕು ಪ್ರಾಣಿ ಮಾಲೀಕರು ಕಚಡಾ ಮನಸ್ಸು ಬಿಡಲಿ.